ರಾಜ್ಯದಲ್ಲಿ ನಗರೋತ್ಥಾನ ಪರ್ವಕಾಲ; ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ 3885 ಕೋಟಿ ರೂಪಾಯಿ

xcvxcvxcvdfg
Published on

ಬೆಂಗಳೂರು: ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 3885 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರ ಜತೆಯಲ್ಲೇ ಬೆಂಗಳೂರು ಮಹಾನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ ಮೂರು ವರ್ಷಗಳಲ್ಲಿ 6 ಸಾವಿರ ಕೋಟಿ ರೂ. ವೆಚ್ಚ ಮಾಡುವ ಮಹತ್ವದ ತೀರ್ವನವೂ ಹೊರಬಿದ್ದಿದೆ.

ಸ್ವಾತಂತ್ರೊ್ಯೕತ್ಸವ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ, ಶಾಲೆ, ಆಸ್ಪತ್ರೆ ಸೇರಿ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ಪ್ರಕಟಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇದೀಗ, ನಗರೋತ್ಥಾನ ನಾಲ್ಕನೇ ಹಂತವನ್ನು ಜಾರಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಸಂಪುಟ ಸಭೆ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಅವರು ಸುದ್ದಿಗಾರರಿಗೆ ಸಭೆಯ ತೀರ್ಮಾನ ತಿಳಿಸಿದರು. 2022-23ರಿಂದ 24-25 ನೇ ಸಾಲಿನ ಈ ಕ್ರಿಯಾ ಯೋಜನೆಯನ್ನು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿಕೊಂಡಿದೆ.

ಈ ಯೋಜನೆಯ ಅಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಿದ ಒಟ್ಟು ಮೊತ್ತದಲ್ಲಿ ಶೇ.24.10 ಹಣವನ್ನು ಪರಿಶಿಷ್ಟ ಜಾತಿ, ಗಿರಿಜನ ಉಪಯೋಜನೆಗಳಿಗೆ ಸೇರಿದ ಜನ ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ. ಶೇ.5 ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮತ್ತು ಶೇ. 7.25 ಅನುದಾನವನ್ನು ಇತರ ಬಡಜನರ ಕಲ್ಯಾಣಕ್ಕಾಗಿ ಹಾಗೂ ಮೂಲಸೌಕರ್ಯ ಒದಗಿಸಲು ಮೀಸಲಿಡಲು ನಿರ್ಧರಿಸಲಾಗಿದೆ.

ಪ್ರಮುಖ ತೀರ್ಮಾನಗಳು:

  1. ನಟ ಅಂಬರೀಶ್ ಸ್ಮಾರಕವನ್ನು ಕಂಠೀರವ ಸ್ಟುಡಿಯೋದ ಆವರಣದಲ್ಲಿ ನಿರ್ವಿುಸಲು 12 ಕೋಟಿ ರೂ
  2. ನೋಂದಣಿ, ಮುದ್ರಾಂಕ ಇಲಾಖೆ ಎಲ್ಲ ಕಚೇರಿಯನ್ನು ತಾಂತ್ರಿಕವಾಗಿ ಸಮಗ್ರ ಅಪ್​ಡೇಟ್ ಮಾಡುವುದಕ್ಕೆ 406 ಕೋಟಿ
  3. ಜೋಗದಲ್ಲಿ ಐಷಾರಾಮಿ ಹೋಟೆಲ್, ಶರಾವತಿ ನದಿಗೆ ರೋಪ್​ವೇ ನಿರ್ವಿುಸಲು ಖಾಸಗಿ ಸಹಭಾಗಿತ್ವದ ಯೋಜನೆಗೆ -116 ಕೋಟಿ

ಯಾರಿಗೆಷ್ಟು ಹಂಚಿಕೆ?:

  1. 23 ಜಿಲ್ಲಾ ಕೇಂದ್ರದ ನಗರ ಸಭೆಗಳು ಮತ್ತು 1ನೇ ದರ್ಜೆಯ ನಗರ ಸಭೆಗಳಿಗೆ ತಲಾ 40 ಕೋಟಿ ರೂ.ನಂತೆ -ಠಿ;920 ಕೋಟಿ
  2. ಉಳಿದ 38 ನಗರ ಸಭೆಗಳಿಗೆ ತಲಾ 30 ಕೋಟಿ ರೂ.ನಂತೆ 1140 ಕೋಟಿ ರೂ. ಹಂಚಿಕೆ
  3. 124 ಪುರಸಭೆಗಳಿಗೆ ತಲಾ 10 ಕೋಟಿ ರೂ.ನಂತೆ 1240 ಕೋಟಿ ರೂ., 117 ಪಟ್ಟಣ ಪಂಚಾಯಿತಿಗಳಿಗೆ ತಲಾ 5 ಕೋಟಿ ರೂ.ಗಳಂತೆ 585 ಕೋಟಿ ರೂ.

ಕೆಪಿಎಸ್ಸಿ 2011 ಬ್ಯಾಚ್​ಗೆ ಮರು ಜೀವ:

ಕೆಪಿಎಸ್ಸಿ 2011ರ ಬ್ಯಾಚ್ ವಿಷಯದಲ್ಲಿ ಸೂಕ್ತ ತೀರ್ಮಾನ ಮಾಡುವ ಮುನ್ನ ಹಿಂದಿನ ಪ್ರಕ್ರಿಯೆ ಗಮನಿಸಿ ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲು ಸಿಎಂ ಬಸವರಾಜ ಬೊಮ್ಮಾಯಿಯವರು ಕಾನೂನು ಸಚಿವರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಈ ವಿಷಯ ಚರ್ಚೆಯಾಗಿತ್ತು, ಸಂಪುಟ ಸಭೆಯಲ್ಲಿ ಸಣ್ಣ ಚರ್ಚೆ ನಡೆದಿತ್ತು. ಇದೀಗ ಅಂತಿಮ ನಿರ್ಧಾರ ಕೈಗೊಳ್ಳಲು ಪೂರ್ವ ತಯಾರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ. ಕೆಪಿಎಸ್ಸಿ 2011ರ ಬ್ಯಾಚ್​ನ ಪ್ರವೇಶ ಪರೀಕ್ಷೆ, ಸಂದರ್ಶನದಲ್ಲಿ ಅಕ್ರಮ ನಡೆದಿದೆ ಎಂದು ತನಿಖೆಯಾಗಿತ್ತು. ನ್ಯಾಯಾಲಯದಲ್ಲೂ ವಿಚಾರಣೆಯಾಗಿ ಪ್ರಕ್ರಿಯೆಯನ್ನೇ ಕೈಬಿಡಬೇಕೆಂದು ನಿರ್ದೇಶನ ಬಂದಿತ್ತು. ಆದರೆ 362 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕೆಂಬ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

ಆಯುಷ್ ನೇರ ನೇಮಕ: ಸಂಪುಟದಲ್ಲಿ ಚರ್ಚೆಯಾದ ಇತರ ಪ್ರಮುಖ ವಿಷಯಗಳಲ್ಲಿ ಆಯುಷ್ ಶುಶ್ರೂಷಕರ ಹುದ್ದೆಗಳ ನೇರ ನೇಮಕವೂ ಒಂದು. ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳನ್ನು ನೇರ ನೇಮಕ ಮೂಲಕ ಭರ್ತಿ ಮಾಡಲು ನಿರ್ಧರಿಸಲಾಗಿದೆ.

177 ಹುದ್ದೆಯ ಪೈಕಿ 80 ಹುದ್ದೆಯನ್ನು ನೇರ ನೇಮಕ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಈಗಾಗಲೇ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಪ್ರತಿ ವರ್ಷದ ಸೇವೆಗೆ 2 ಅಂಕದಂತೆ 20 ಅಂಕ ಕೊಡಬಹುದೆಂದು ತೀರ್ವನಿಸಲಾಗಿದೆ. ಗರಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ. ಈ ಕಾರ್ಯಕ್ಕಾಗಿ ಕರ್ನಾಟಕ ಆಯುಷ್ (ಬೋಧಕೇತರ) (ರಾಜ್ಯ ಮಟ್ಟದ ಉಳಿಕೆ ಮೂಲ ವೃಂದದಲ್ಲಿ ಶುಶ್ರೂಷಕರ ಹುದ್ದೆಗೆ ನೇರ ನೇಮಕಾತಿ) (ವಿಶೇಷ), ನಿಯಮಗಳು 2022ಕ್ಕೆ ಅನುಮೋದನೆ ನೀಡಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಬಿಲ್ಡ್, ಓನ್ ಮತ್ತು ಆಪರೇಟ್ ಮಾದರಿಯಲ್ಲಿ ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ, ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡಲು ಅಗತ್ಯ ಇರುವ ಮಾನವ ಸಂಪನ್ಮೂಲ ನಿಯೋಜಿಸುವ ಸಂಬಂಧ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲು ಅಗತ್ಯ ಇರುವ 406.44 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಸಮಗ್ರವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳನ್ನು ‘ಬೂ’ ಮಾಡಲ್​ನಲ್ಲಿ ಸಜ್ಜುಗೊಳಿಸಲಾಗುತ್ತದೆ. ಆ ಮೂಲಕ ಖಾಸಗಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಜೋಗ ಅಭಿವೃದ್ಧಿಗೆ ಮನ್ನಣೆ: ಜೋಗ ಜಲಪಾತ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ, ಡಿಬಿಎಫ್​ಒಟಿ ಆಧಾರದಲ್ಲಿ ಐಷಾರಾಮಿ ಹೋಟೆಲ್ ಮತ್ತು ಶರಾವರಿ ನದಿಗೆ ಅಡ್ಡಲಾಗಿ ರೋಪ್ ವೇಯನ್ನು 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net