

ಪಿರಿಯಾಪಟ್ಟಣ: ಇಲ್ಲಿನ ಪುರಸಭೆ ಕಾರ್ಯಾಲಯದ ನೂತನ ಕಟ್ಟಡ ಜೂ. 15ರಂದು ಲೋಕಾರ್ಪಣೆಗೊಳ್ಳಲಿದೆ.
ಸೋಮವಾರ ಸಂಜೆ 4 ಗಂಟೆಗೆ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ ಕಟ್ಟಡವನ್ನು ಉದ್ಘಾಟಿಸಲಿದ್ದು, ಶಾಸಕ ಕೆ.ಮಹದೇವ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್‌ಸಿಂಹ ಇತರರು ಭಾಗವಹಿಸಲಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪ ಬಿ.ಎಂ. ರಸ್ತೆಗೆ ಹೊಂದಿಕೊಂಡಂತಿರುವ ಬೆಳದಿಂಗಳ ಕಟ್ಟೆಯಲ್ಲಿ 2.72 ಕೋಟಿ ರೂ. ವೆಚ್ಚದಲ್ಲಿ ಉತ್ತಮ ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣಗೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಸಕರಾಗಿದ್ದ ಕೆ.ವೆಂಕಟೇಶ್ ಅವರ ಪ್ರಯತ್ನದಿಂದಾಗಿ ಪುರಸಭೆ ಕಾರ್ಯಾಲಯದ ಈ ನೂತನ ಕಟ್ಟಡಕ್ಕೆ ಸ್ವತಃ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು.
ನೂತನ ಕಟ್ಟಡದಲ್ಲಿ ವಿಶಾಲ ಸಭಾಂಗಣ, ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿಗೆ ಪ್ರತ್ಯೇಕ ಕೊಠಡಿ ಸೇರಿದಂತೆ ಹಲವು ಕೊಠಡಿಗಳಿವೆ. ಕೆಳ ಅಂತಸ್ತಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಉಗ್ರಾಣವನ್ನೂ ನಿರ್ಮಿಸಲಾಗಿದೆ.