ಹಿಂದಿನ ಮೀಸಲಾತಿಯಂತೆ ಪಾಲಿಕೆ ಎಲೆಕ್ಷನ್

palike
ಶಿವಮೊಗ್ಗ ನಗರ ಪಾಲಿಕೆಯಿಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿ.ಎಸ್.ಸಂಗ್ರೇಶಿ ಮಾತನಾಡಿದರು. ಡಾ.ಕವಿತಾ ಯೋಗಪ್ಪನವರ್ ಇದ್ದರು.
Published on

ಶಿವಮೊಗ್ಗ:ಒಂದೂವರೆ ವರ್ಷಗಳಿಂದ ಶಿವಮೊಗ್ಗ ನಗರ ಪಾಲಿಕೆಗೆ ಜನಪ್ರತಿನಿಧಿಗಳಿಲ್ಲ. ಸರ್ಕಾರ ಮೀಸಲಾತಿ ಘೋಷಣೆ ಮಾಡಿಲ್ಲ. ಹೀಗಾಗಿ ಹಿಂದಿನ ಮೀಸಲಾತಿ ಪ್ರಕಾರ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಯೋಗದಿಂದ ಹೈಕೋರ್ಟ್‌ಗೆ ರಿಟ್ ಸಲ್ಲಿಕೆಯಾಗಿದೆ. ಆದೇಶ ಬಂದ ನಂತರ ಚುನಾವಣೆ ಘೋಷಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.

ಶುಕ್ರವಾರ ಮಹಾನಗರ ಪಾಲಿಕೆ ಚುನಾವಣೆ ಶಾಖೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಅವರು, ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರಗಳು ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿದ್ದರೆ ಆಯೋಗವು ಸಂಬಂಧಿಸಿದ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲು ಅವಕಾಶವಿದೆ. ಈಗ ನ್ಯಾಯಾಲಯಕ್ಕೆ ರಜೆ ಇರುವುದರಿಂದ ರಿಟ್ ಅರ್ಜಿ ವಿಚಾರಣೆಗೆ ಬಂದಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಮತದಾರರ ಪಟ್ಟಿ ಸಿದ್ಧಪಡಿಸಲು ವೇಳಾಪಟ್ಟಿ ಹೊರಡಿಸಲಾಗಿತ್ತು. ಆದರೆ ಚುನಾವಣೆ ಘೋಷಣೆಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೀಗಾಗಿ ರಿಟ್ ಸಲ್ಲಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಯಾವುದೇ ಸಂದರ್ಭದಲ್ಲಿ ನಗರಪಾಲಿಕೆಗೆ ಚುನಾವಣೆ ಘೋಷಣೆಯಾದರೂ ಗೊಂದಲ ರಹಿತ ಚುನಾವಣಾ ಪ್ರಕ್ರಿಯೆಗೆ ಸಿಬ್ಬಂದಿ ತಯಾರಿರಬೇಕು. ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ಗೊಂದಲ ಇರದಂತೆ, ಯಾರೊಬ್ಬರೂ ಪಟ್ಟಿಯಿಂದ ಹೊರಗುಳಿಯದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ಪಾಲಿಕೆ ಚುನಾವಣೆಗೆ ನಡೆದಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು. ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net