ಪಾಲಿಕೆ ಶಿಕ್ಷಕರಿಗೆ 4 ತಿಂಗಳಿಂದ ಸಂಬಳವಿಲ್ಲ: ಕಡಿತ ವಿಲೇಗೆ ಜಿಬಿಎ ಹಿಂದೇಟು

palike school
Published on

ಆರ್​​.ತುಳಸಿಕುಮಾರ್​​​

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಪಾಲಿಕೆ ಶಾಲಾ-ಕಾಲೇಜುಗಳ ಶಿಕ್ಷಕ/ಉಪನ್ಯಾಸಕರಿಗೆ ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಬಿಬಿಎಂಪಿಯಿಂದ ಜಿಬಿಎಗೆ ಬದಲಾವಣೆಯಾದ ಬಳಿಕ ಹೊಸ ಪಾಲಿಕೆಗಳಲ್ಲಿ ಶಿಕ್ಷಣ ವಿಭಾಗವನ್ನು ಪ್ರತ್ಯೇಕವಾಗಿ ತೆರೆಯದ ಕಾರಣ ಬೋಧಕ ವೃಂದ ಸಂಬಳವಿಲ್ಲದೆ ಪಾಠ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ಸಮರ್ಪಕವಾದ ಮೂಲಸೌಲಭ್ಯ ಇಲ್ಲದ ಬಗ್ಗೆ ಪಾಲಕರು ಪದೇ ಪದೆ ದನಿಯತ್ತುತ್ತಿದ್ದಾರೆ. ಇದನ್ನಾಧರಿಸಿ ಕಾರ್ಪೋರೇಷನ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಸಿಎಸ್‌ಆರ್ ನಿಧಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ, ನಿಧಿ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಶಿಕ್ಷಣ ಕೇಂದ್ರಗಳ ಮೇಲ್ದರ್ಜೆ ಕಾರ್ಯ ನೆನೆಗುದಿಗೆ ಬಿದ್ದಿದೆ. ಈಗ ಶಿಕ್ಷಕರಿಗೆ ನಾಲ್ಕು ತಿಂಗಳಿಂದ ವೇತನ ಪಾವತಿ ಮಾಡದಿದ್ದಲ್ಲಿ ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಸಿಗಲಿದೆ ಎಂಬುದಾಗಿ ಪಾಲಕರು ಅತೃಪ್ತಿ ಹೊರಹಾಕಿದ್ದಾರೆ.

ಕಡತ ವಿಲೇವಾರಿಗೆ ಮೀನಮೇಷ:

ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಗುತ್ತಿಗೆ ಶಿಕ್ಷಕರಿಗೆ ಪ್ರತೀ ತಿಂಗಳೂ ಗೌರವಧನ ನೀಡಲಾಗುತ್ತಿತ್ತು. ಕೆಲವೊಮ್ಮೆ ಬಟವಾಡೆ ತಡವಾದರೂ, ಮರು ತಿಂಗಳು ಒಟ್ಟಿಗೆ ಸೇರಿಸಿ ವಿತರಿಸಲಾಗುತ್ತಿತ್ತು. ಈಗ ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಶಾಲಾ-ಕಾಲೇಜುಗಳನ್ನು ಆಯಾ ಕಾರ್ಪೋರೇಷನ್‌ಗಳ ಸುಪರ್ದಿಗೆ ವಹಿಸಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಜಿಬಿಎ ಕಚೇರಿಯಲ್ಲೇ ಗಿರಕಿ ಹೊಡೆಯುತ್ತಿದೆ. ಶಿಕ್ಷಣ ವಿಭಾಗಕ್ಕೆ ಹಿರಿಯ ಸಹಾಯಕ ನಿರ್ದೇಶಕರ (ಎಸ್‌ಎಡಿಪಿ) ನಿಯೋಜನೆ ಆಗಿದ್ದರೂ, ಶಿಕ್ಷಣ ಸಂಸ್ಥೆಗಳನ್ನು ಹಸ್ತಾಂತರಿಸುವ ಅಥವಾ ಜಿಬಿಎನಲ್ಲೇ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ತಾಂತ್ರಿಕ ನೆಪವೊಡ್ಡಿ ಕಡತ ವಿಲೇವಾರಿ ಮಾಡದ ಕಾರಣ ಶಿಕ್ಷಕರಿಗೆ ವೇತನ ಬಿಡುಗಡೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಗುತ್ತಿಗೆ ಶಿಕ್ಷಕರ ಕಡೆಗಣನೆ:

ಪ್ರಸ್ತುತ ಜಿಬಿಎ ವ್ಯಾಪ್ತಿಯಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢ, ಕಾಲೇಜು ಸೇರಿ ಒಟ್ಟು 159 ಶಿಕ್ಷಣ ಕೇಂದ್ರಗಳಿವೆ. ಇವುಗಳಲ್ಲಿ ಶೇ.20 ಬೋಧಕರು ಕಾಯಂ ಇದ್ದು, ಉಳಿದ 830ಕ್ಕೂ ಹೆಚ್ಚು ಮಂದಿ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮಾಸಿಕ ಗೌರವಧನ ನೀಡಲಾಗುತ್ತಿದ್ದರೂ, ಪ್ರತೀ ತಿಂಗಳು ಹಣ ಕೈಸೇರುತ್ತಿಲ್ಲ. ದಶಕಗಳಿಂದ ಕಡಿಮೆ ಹಣಕ್ಕೆ ಪಾಠ ಮಾಡುತ್ತಿರುವ ಹೆಚ್ಚಿನ ಶಿಕ್ಷಕರು 50ರ ಆಸುಪಾಸಿನಲ್ಲಿದ್ದಾರೆ. ಹುದ್ದೆ ಕಾಯಂ ಮಾಡದ ಕಾರಣ ವಯೋಮಿತಿ ಮೀರಿರುವುದರಿಂದ ಅನ್ಯ ಕೆಲಸಕ್ಕೆ ಸೇರಲು ಸಾಧ್ಯವಾಗದೆ ಇಬ್ಬಂದಿ ಸ್ಥಿತಿಯಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಕುಟುಂಬ ನಿರ್ವಹಣೆಗೆ ಪರದಾಡಬೇಕಾದ ಸ್ಥಿತಿ ಇದೆ ಎಂಬುದಾಗಿ ಪಾಲಿಕೆಯ ಗುತ್ತಿಗೆ ಶಿಕ್ಷಕರು ಅಳಲು ವ್ಯಕ್ತಪಡಿಸಿದ್ದಾರೆ.

ಇಎಸ್‌ಐ, ಪಿಎಫ್​ ಸೌಲಭ್ಯಕ್ಕೆ ಕೊಕ್:

ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಗೌರವಧನ ನಿಗದಿಯಾಗಿದ್ದರೂ, ಕಂಪನಿಯು ಈ ಸೌಲಭ್ಯವನ್ನು ನೀಡುತ್ತಿಲ್ಲ. ಪಾಲಿಕೆ ಕೂಡ ಮೌನಕ್ಕೆ ಶರಣಾಗಿದೆ. ಕಳೆದ ಮಾ.29ರಂದು ಮಂಡಿಸಿರುವ 2025-26ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಗುತ್ತಿಗೆ ಶಿಕ್ಷಕರಿಗೆ 2 ಸಾವಿರ ರೂ. ಗೌರವಧನ ಹೆಚ್ಚಿಸುವ ಘೋಷಣೆ ಮಾಡಲಾಗಿತ್ತು. ಇದು ಈವರೆಗೂ ಜಾರಿಗೆ ಬಂದಿಲ್ಲ. ಇತ್ತೀಚಿಗೆ ನಡೆದ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಮುಷ್ಕರದ ವೇಳೆ ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ವಾಗ್ದಾನ ನೀಡಿದ್ದರೂ, ಈವರೆಗೂ ಜಾರಿಯಾಗಿಲ್ಲ.

ಈಡೇರದ ಡಿಸಿಎಂ ಭರವಸೆ:

ಪಾಲಿಕೆ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಬೋಧಕ ವೃಂದದ ವ್ಯವಸ್ಥೆ ಮಾಡಲಾಗುವುದು. ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ನಿಗದಿತ ದಿನದಂದು ವೇತನ ಬಟವಾಡೆ ಮಾಡುವ ಆಶ್ವಾಸನೆ ನೀಡಲಾಗಿತ್ತು. ಜತೆಗೆ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದಾಗಿ ಡಿಸಿಎಂ ಭರವಸೆ ನೀಡಿದ್ದರು. ಇದು ಕೂಡ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆ ಕೂಡ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ.

ಜಿಬಿಎ ವ್ಯಾಪ್ತಿಯ ಶೈಕ್ಷಣಿಕ ಕೇಂದ್ರಗಳ ವಿವರ:

ಶಾಲಾ ವಿಧ ಸಂಖ್ಯೆ ಗೌರವಧನ (ರೂ.ಗಳಲ್ಲಿ)

ನರ್ಸರಿ 94 19,366

ಪ್ರಾಥಮಿಕ 16 19,366

ಪ್ರೌಢಶಾಲೆ 33 22,840

ಪದವಿಪೂರ್ವ 20 25,697

ಪದವಿ ಕಾಲೇಜು 4 27,897

ಪಿಜಿ ಕಾಲೇಜು 2 30,897

ದಶಕಗಳಿಂದ ಮಕ್ಕಳಿಗೆ ಗುಣಮಟ್ಟದ ಪಾಠ-ಪ್ರವಚನ ಮಾಡುತ್ತಿದ್ದರೂ, ಬೋಧಕ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳು ಮರಿಚಿಕೆಯಾಗಿವೆ. ಕಡಿಮೆ ಸಂಬಳದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆರೋಗ್ಯ ವಿಮೆ ಸೌಲಭ್ಯವಿಲ್ಲದ ಕಾರಣ ದುಡಿದ ಹಣ ಆಸ್ಪತ್ರೆಗೆ ತೆರಬೇಕಾದ ಸ್ಥಿತಿ ಇದೆ. ಗೌರವಧನ ಹೆಚ್ಚಳದ ಜತೆಗೆ ವಿಮೆ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಲಿ.

- ಪದಾಧಿಕಾರಿ, ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net