

ಮುಂಬೈ: ಪತ್ರಕರ್ತನಾದವನು ಸೂಕ್ಷ್ಮಮತಿಯಾಗಿರಬೇಕು. ಅನುಭವ ಮತ್ತು ವಿಶೇಷ ಜವಾಬ್ದಾರಿ ಅವಶ್ಯಕ ಎಂದು ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ವಿಶೇಷ ಕಮ್ಮಟದಲ್ಲಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಲೇಖಕರಾಗಿ ಬೆಳೆಯಲು ಸಾಧ್ಯ. ಸಾರ್ವಜನಿಕರಲ್ಲಿ ಪತ್ರಕರ್ತರ ಬಗ್ಗೆ ಹೆಚ್ಚಿನ ಗೌರವವಿದೆ ಎಂದರು.
ಪತ್ರಿಕೆಯ ವರದಿಗಳು ಜನರನ್ನು ತಪ್ಪುದಾರಿಗೆ ಎಳೆಯಬಾರದು. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದರಿಂದ ಸಮಾಜದ ಅನೇಕ ಜನರ ಪರಿಚಯವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ, ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಇಂದು ಪತ್ರಿಕೋದ್ಯಮದಲ್ಲಿ ವೃತ್ತಿ ನಿಷ್ಠೆ ಕಡಿಮೆಯಾಗುತ್ತಿದೆ ಎಂದು ಪತ್ರಿಕೋದ್ಯಮದ ತಮ್ಮ ಅನುಭವ ತೆರೆದಿಟ್ಟರು.
ಒಳ್ಳೆಯ ಛಾಯಚಿತ್ರಗ್ರಾಹಕನಾಗಲು ಅನುಭವ ಬೇಕು. ವರದಿ ಮತ್ತು ಛಾಯಚಿತ್ರಗ್ರಹಣ ಮಾಡುತ್ತಿರುವುದರಿಂದ ನಾನಿಂದು 18 ರಾಷ್ಟ್ರಗಳನ್ನು ಸುತ್ತಿದ್ದೇನೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ, ಡಾ. ಜಿ.ಎನ್. ಉಪಾಧ್ಯ, ಸಾಹಿತ್ಯ ಸಮಾಜ ಕೇಂದ್ರೀಕೃತವಾದದ್ದು. ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಮಾಜದ ಆಗುಹೋಗುಗಳ ಬಗ್ಗೆ ತಿಳಿವಳಿಕೆ ಇರಬೇಕು ಎಂದರು.
'ದೇವಾಡಿಗ ಜನಾಂಗ; ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಎಂಫಿಲ್ ಪ್ರಬಂಧವನ್ನು ಪ್ರಕಟಿಸಿದ ಸಂಶೋಧನಾ ಸಹಾಯಕಿ ಸುರೇಖಾ ದೇವಾಡಿಗ, ಅನೇಕ ತೊಂದರೆಗಳ ನಡುವೆ ಅಧ್ಯಯನ ಮಾಡಿ ಮುಗಿಸಿದಾಗ ಮಹಿಳೆಗೆ ಸಾರ್ಥಕ ಬಾವನೆ ಮೂಡುತ್ತದೆ ಎಂದರು.
ವಿದ್ಯಾರ್ಥಿ ಕಲಾ ಭಾಗ್ವತ್ ಭಾವಗೀತೆ ಹಾಡಿದರು. ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಸ್ವಾಗತಿಸಿದರು. ವಿದ್ಯಾರ್ಥಿ ಸೋಮಶೇಖರ ಮಸಳಿ ಧನ್ಯವಾದ ಅರ್ಪಿಸಿದರು.