Train: ಹಳಿ ತಪ್ಪಿದ ಲೋಕಲ್ ರೈಲು: ಸೇವೆಯಲ್ಲಿ ವ್ಯತ್ಯಯ

Train
Published on

ಮುಂಬೈ: ಮುಂಬೈನ ಲೋಕಲ್ ರೈಲಿ(Train)ನ ಎರಡು ಬೋಗಿಗಳು ಭಾನುವಾರ ಹಳಿತಪ್ಪಿದ್ದು, ಇದರಿಂದಾಗಿ ಪಶ್ಚಿಮ ರೈಲ್ವೇ ವಿಭಾಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಂಬೈ ಸೆಂಟ್ರಲ್‌ನಿಂದ ಕಾರ್ ಶೆಡ್‌ಗೆ ಹೋಗುತ್ತಿದ್ದಾಗ ಖಾಲಿ ಇಎಂಯು ರೇಕ್‌ಗೆ ಸೇರಿದ ಎರಡು ಕೋಚ್‌ಗಳು ಹಳಿತಪ್ಪಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಖಾಲಿಯಾಗಿದ್ದ ಕಾರಣ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ತಿಳಿಸಿದ್ದಾರೆ. ಬೋಗಿಗಳು ಹಳಿತಪ್ಪಿದ ಕಾರಣ ಉಪನಗರ ಸೇವೆಗಳು ಸ್ಥಗಿತಗೊಂಡಿವೆ.

ಘಟನೆಯ ನಂತರ, ಚರ್ಚ್‌ಗೇಟ್ ಮತ್ತು ಮುಂಬೈ ಸೆಂಟ್ರಲ್ ನಡುವಿನ 'ಸ್ಲೋ ಟ್ರ್ಯಾಕ್'ನಲ್ಲಿ ಸಂಚಾರವನ್ನು ನಿಲ್ಲಿಸಲಾಯಿತು. ಎರಡು ನಿಲ್ದಾಣಗಳ ನಡುವಿನ ಎಕ್ಸ್​ಪ್ರೆಸ್​ ಮಾರ್ಗಕ್ಕೆ ರೈಲುಗಳನ್ನು ತಿರುಗಿಸಲಾಗಿದೆ.

2 ರೈಲು ಬೋಗಿಗಳು ಇಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೂಡಲೇ ಮಾರ್ಗಗಳ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕಳೆದ ಶುಕ್ರವಾರ ರಾತ್ರಿ ತಮಿಳುನಾಡಿನ ಚೆನ್ನೈ ಹೊರವಲಯದಲ್ಲಿ ರೈಲು ಅಪಘಾತ ಸಂಭವಿಸಿತ್ತು. ತಿರುವಳ್ಳೂರು ಬಳಿಯ ಕವರಿಪೆಟ್ಟೈ ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಸುಟ್ಟು ಕರಕಲಾಗಿವೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net