ಆಭರಣ ಕದ್ದಿದ್ದೀಯ ಎಂದು ಮಗಳು ಮಾಡಿದ ಆರೋಪಕ್ಕೆ ಮನ ನೊಂದ ತಾಯಿ, 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

GOLD
Published on

ಮುಂಬೈ: ಬಂಗಾರದ ರೇಟು ಮುಗಿಲು ಮುಟ್ಟುತ್ತಿದೆ. ಚಿನ್ನದಿಂದಾಗಿ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಿದೆ. ಮಗಳು ತಾಯಿ ಮೇಲೆ ಅನುಮಾನ ಪಡುವಷ್ಟರ ಮಟ್ಟಿಗೆ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ!

ಇದು ಅಂತಹದ್ದೇ ಸುದ್ದಿ. 52 ವರ್ಷದ ಮಹಿಳೆ ಲೋಖಂಡವಾಲಾದಲ್ಲಿ ತನ್ನ ಮಗಳ ಜತೆ ವಾಗ್ವಾದ ನಡೆಸಿ ಮನೆಯ ಮೇಲಿನಿಂದ ಹಾರಿದ್ದಾಳೆ. ತನ್ನ ತಾಯಿಯೇ ಬಂಗಾರ ಕದ್ದಿದ್ದಾಳೆ ಎನ್ನುವುದು ಮಗಳ ಆರೋಪ.

ಭಾನುವಾರ (ಫೆ.16) ಸಂಜೆ ಹೊತ್ತಿಗೆ ಘಟನೆ ನಡೆದಿದ್ದು, ಮನೆಯ 7ನೇ ಮಹಡಿಗೆ ಹೋದ ತಾಯಿ ಅಲ್ಲಿಂದ ಹಾರಿದ್ದಾಳೆ. ಆಕೆಯ ದೇಹ 2 ನೇ ಮಹಡಿಯಲ್ಲಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ತಾಯಿಯ 32 ವರ್ಷದ ಮಗಳು ತಾಯಿ ಜತೆ ಜಗಳ ತೆಗೆದಿದ್ದಾಳೆ. ಮಗಳು ತನ್ನ ಗಂಡನ ಜತೆ ಹೊರ ಹೋಗಬೇಕಿತ್ತು. ಆಗ ಆಭರಣ ಧರಿಸುವಾಗ ಕೆಲ ಒಡವೆಗಳು ನಾಪತ್ತೆಯಾಗಿರುವುದು ತಿಳಿದಿದೆ. ಆದಕ್ಕೆ ತನ್ನ ತಾಯಿಯೇ ಆಭರಣ ಕದ್ದಿದ್ದಾಳೆ ಎಂದು ಮಗಳು ಆರೋಪಿಸಿದ್ದಾಳೆ.

ಹೀಗೆ ಜಗಳ ನಡೆಯುವಾಗ ಮಗಳು, ಬಾತ್​ರೂಮ್​ಗೆ ಹೋಗಿ ಸಾಯುತ್ತೇನೆ ಎಂದು ಫಿನಾಯಿಲ್​ ಕುಡಿದಿದ್ದಾಳೆ. ತಕ್ಷಣ ಆಕೆಯ ತಂದೆ ಮತ್ತು ಸಂಬಂಧಿ ಮಹಿಳೆ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಈಗ ಗುಣಮುಖವಾಗಿದ್ದಾಳೆ.

ಮಗಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಮನೆಯಲ್ಲಿ ಒಬ್ಬಳೇ ಇದ್ದ ತಾಯಿ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಕ್ಕಪಕ್ಕದ ಮನೆಯವರು ದೇಹ ನೋಡಿ ವಾಚ್​ಮನ್​ಗೆ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ತಾಯಿ ಬಗ್ಗೆ ಆತ್ಮಹತ್ಯೆ ದೂರು ದಾಖಲಿಸಿಕೊಳ್ಳಬೇಕೋ ಅಥವಾ ಆತ್ಮಹತ್ಯೆಗೆ ಪ್ರಚೋದಿಸಿದಳು ಎಂದು ಮಗಳ ವಿರುದ್ಧ ದೂರು ದಾಖಲಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net