ಫೇಕ್ ಟಿಆರ್​ಪಿ ಹಗರಣ- ಚಾರ್ಜ್​ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

TRP Scam
Published on

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್​ (ಟಿಆರ್​ಪಿ) ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಹಗರಣಕ್ಕೆ ಸಂಬಂಧಿಸಿ ಚಾರ್ಜ್​ಶೀಟನ್ನು ಮುಂಬೈ ಪೊಲೀಸರು ಮಂಗಳವಾರ ಕೋರ್ಟ್​ಗೆ ಸಲ್ಲಿಸಿದ್ದಾರೆ. ಕ್ರೈಂ ಇಂಟೆಲಿಜೆನ್ಸ್ ಯುನಿಟ್​ನ ಪೊಲೀಸರು ಚಾರ್ಜ್​ಶೀಟ್ ಸಿದ್ಧಪಡಿಸಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಸಲ್ಲಿಸಿದ್ದಾರೆ.

ಫೇಕ್ ಟಿಆರ್​ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಒಟ್ಟು 12 ಜನರನ್ನು ಬಂಧಿಸಿದ್ದಾರೆ. ಕೆಲವೊಂದು ಟಿವಿ ಚಾನೆಲ್​ಗಳು ಟಿಆರ್​ಪಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಪ್ರಕಟಿಸುತ್ತಿರುವ ಬಗ್ಗೆ ಕಳೆದ ತಿಂಗಳು ಬ್ರಾಡ್​ಕಾಸ್ಟ್​ ಆಡಿಯೆನ್ಸ್ ರೀಸರ್ಚ್​ ಕೌನ್ಸಿಲ್ (ಬಿಎಆರ್​ಸಿ) ಹನ್ಸಾ ರೀಸರ್ಚ್ ಗ್ರೂಪ್​ ಮೂಲಕ ದೂರು ದಾಖಲಿಸಿತ್ತು. ಆಗ ಫೇಕ್ ಟಿಆರ್​ಪಿ ಹಗರಣ ಬೆಳಕಿಗೆ ಬಂದಿದೆ.

ಹನ್ಸಾ ರೀಸರ್ಚ್​ ಗ್ರೂಪ್​ ವೀಕ್ಷಕರ ಡೇಟಾ ಸಂಗ್ರಹದ ಹೊಣೆಗಾರಿಕೆ ಹೊತ್ತುಕೊಂಡಿದ್ದು, ಆಯ್ದ ವೀಕ್ಷಕರ ಮನೆಗಳಲ್ಲಿ ಬೇರೋಮೀಟರ್​ಗಳನ್ನು ಅಳವಡಿಸುವ ಕೆಲಸ ಮಾಡುತ್ತದೆ. ಹೀಗಾಗಿ ದೂರು ದಾಖಲಿಸಲು ಬಿಎಆರ್​ಸಿ ಹನ್ಸಾಗೆ ಸೂಚಿಸಿತ್ತು. ಚಾನೆಲ್​ಗಳ ಜಾಹೀರಾತು ಆದಾಯಕ್ಕೆ ಟಿಆರ್​ಪಿ ಪ್ರಮುಖ ಮಾನದಂಡವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net