

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಹನ್ನೆರಡಕ್ಕೂ ಹೆಚ್ಚು ಇಂಟೆಲಿಜೆನ್ಸ್ ಏಜೆನ್ಸಿಗಳನ್ನು ಏಕತ್ರಗೊಳಿಸುವುದಕ್ಕಾಗಿ ನ್ಯಾಷನಲ್ ಇಂಟೆಲಿಜೆನ್ಸ್ ಕೋಆರ್ಡಿನೇಷನ್ ಕಮಿಟಿ (ಎನ್ಐಸಿಸಿ) ರಚಿಸುವುದಕ್ಕೆ ಇಮ್ರಾನ್ ಖಾನ್ ಸರ್ಕಾರ ಅನುಮತಿ ನೀಡಿದೆ. ಇಂಟರ್-ಸರ್ವೀಸ್ ಇಂಟೆಲಿಜೆನ್ಸ್ (ಐಎಸ್ಐ)ನ ಡೈರೆಕ್ಟರ್ ಜನರಲ್ ಈ ಹೊಸ ಕಮಿಟಿಯ ಮುಖ್ಯಸ್ಥರಾಗಿರಲಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ನ್ಯಾಷನಲ್ ಕೌಂಟರ್ ಟೆರರಿಸಂ ಅಥಾರಿಟಿ ಕೂಡ ಎನ್ಐಸಿಸಿಯ ಭಾಗವಾಗಿ ಇರಲಿದೆ. ದೇಶದಲ್ಲಿರುವ ಗುಪ್ತಚರ ಸಂಘಟನೆಗಳ ನಡುವೆ ಸಮನ್ವಯದ ಕೊರತೆ ಇತ್ತು. ಅದನ್ನು ನೀಗಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಗುಪ್ತಚರ ಸಂಘಟನೆಗಳ ಜತೆಗೆ ಎರಡು ಸುತ್ತಿನ ಮಾತುಕತೆಯನ್ನು ಸರ್ಕಾರ ಮಾಡಿದೆ. ಮುಂದಿನವಾರವೇ ಎನ್ಐಸಿಸಿಯ ಮೊದಲ ಸಭೆ ನಡೆಯುವ ನಿರೀಕ್ಷೆ ಇದೆ. ಅಲ್ಲಿ ಆಯಾ ಸಂಘಟನೆಗಳ ಪಾತ್ರ, ಸಮನ್ವಯದ ಕಾರ್ಯಾಚರಣೆಯನ್ನು ಪರಿಣಾಮಕಾರಿಗೊಳಿಸುವುದು ಸೇರಿ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರೆಹಾನಾ ಫಾತಿಮಾ ಬಾಯಿಗೆ ಬಿತ್ತು ‘ಬೀಗ’ !
ಪಾಕಿಸ್ತಾನದೊಳಕ್ಕೆ ನುಗ್ಗಿ ಅಮೆರಿಕ ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಿದ್ದು ಸೇರಿ ಕೆಲವೊಂದು ಲೋಪಗಳು ಗುಪ್ತಚರ ಸಂಘಟನೆಗಳ ವೈಫಲ್ಯವನ್ನು ಎತ್ತಿಹಿಡಿದಿದ್ದವು. ಅವುಗಳ ನಡುವಿನ ಸಮನ್ವಯದ ಕೊರತೆಯನ್ನೂ ಬೊಟ್ಟು ಮಾಡಿ ತೋರಿಸಿದ್ದವು.ಹೀಗಾಗಿ ಗುಪ್ತಚರ ಸಂಘಟನೆಗಳ ವ್ಯವಸ್ಥೆಯ ಸುಧಾರಣೆ ಆಗಬೇಕು ಎಂಬ ಆಗ್ರಹವೂ ಬಹುಕಾಲದ್ದಾಗಿತ್ತು. ಈ ಹಿಂದೆಯೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದ್ದರ ಉದಾಹರಣೆಗಳಿವೆ. (ಏಜೆನ್ಸೀಸ್)