Mumbai | ಗೇಟ್ ವೇ ಆಫ್ ಇಂಡಿಯಾ ಬಳಿ ದೋಣಿ ಮಗುಚಿ ಇಬ್ಬರು ಸಾವು, ಐವರು ನಾಪತ್ತೆ; ಮುಂದುವರಿದ ಶೋಧ ಕಾರ್ಯ

Untitled design - 2024-12-18T200047.501
Published on

ಮುಂಬೈ(Mumbai): ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಗುಹೆಗಳಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಂಬೈ ಸಮೀಪದ ಎಲಿಫೆಂಟಾ ದ್ವೀಪಗಳ ಬಳಿ ಬುಧವಾರ(ಡಿಸೆಂಬರ್​ 18) ಮಗುಚಿ ಬಿದ್ದಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ನೀಲಕಮಲ್ ಎಂಬ ಹೆಸರಿನ ದೋಣಿಯು ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪದ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ದೋಣಿಯಲ್ಲಿ 80 ಮಂದಿ ಪ್ರಯಾಣಿಕರು ಹಾಗೂ 5 ಮಂದಿ ಸಿಬ್ಬಂದಿ ಇದ್ದರು. ರಕ್ಷಣಾ ಹಡಗು ದೋಣಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ರಕ್ಷಣಾ ಹಡಗು ದೋಣಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ರಕ್ಷಿಸಲಾದ 56 ಜನರನ್ನು ನವಿ ಮುಂಬೈಗೆ, 10 ಮಂದಿಯನ್ನು ಮುಂಬೈ ಡಾಕ್‌ಯಾರ್ಡ್‌ಗೆ ಮತ್ತು 9 ಜನರನ್ನು ಗೇಟ್‌ವೇ ಆಫ್ ಇಂಡಿಯಾಕ್ಕೆ ಕರೆದೊಯ್ಯಲಾಗಿದೆ ಎಂದು ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ ಸಿಇಒ ಮಾಣಿಕ್ ತಿಳಿಸಿದ್ದಾರೆ ಎಂದು ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ನೌಕಾಪಡೆಯು ಕೋಸ್ಟ್ ಗಾರ್ಡ್ ಮತ್ತು ಮೆರೈನ್ ಪೊಲೀಸರೊಂದಿಗೆ ಸಮನ್ವಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನೌಕಾಪಡೆಯ 11 ಬೋಟ್‌ಗಳು, ಮೆರೈನ್ ಪೊಲೀಸರ ಮೂರು ಬೋಟ್‌ಗಳು ಮತ್ತು ಕೋಸ್ಟ್ ಗಾರ್ಡ್‌ನ ಒಂದು ಬೋಟ್ ಪ್ರದೇಶದಲ್ಲಿವೆ. ಇದಲ್ಲದೇ ನಾಲ್ಕು ಹೆಲಿಕಾಪ್ಟರ್‌ಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಭಾರತೀಯ ನೌಕಪಡೆಯ ವಕ್ತಾರರು ತಿಳಿಸಿದ್ದಾರೆ.

ಎಲಿಫೆಂಟಾ ಕಡೆಗೆ ಹೋಗುತ್ತಿದ್ದ ನೀಲಕಮಲ್​​ ದೋಣಿ ಅಪಘಾತಕ್ಕೀಡಾಗಿರುವ ಬಗ್ಗೆ ನಮಗೆ ವರದಿಯಾಗಿದೆ. ನೌಕಾಪಡೆ, ಕೋಸ್ಟ್ ಗಾರ್ಡ್, ಬಂದರು ಮತ್ತು ಪೊಲೀಸ್ ತಂಡಗಳ ದೋಣಿಗಳನ್ನು ಸಹಾಯಕ್ಕಾಗಿ ತಕ್ಷಣವೇ ಕಳುಹಿಸಲಾಗಿದೆ. ನಾವು ಜಿಲ್ಲಾ ಮತ್ತು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದೃಷ್ಟವಷಾತ್ ಹೆಚ್ಚಿನ ನಾಗರಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net