

ನವದೆಹಲಿ: ಫೇಸ್ಬುಕ್ ಸಂಸ್ಥೆಯ ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದರಿಂದ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದಲ್ಲದೆ, ಅದರಿಂದ ತಮ್ಮ ಖಾಸಗಿತನಕ್ಕೇ ಧಕ್ಕೆ ಬರಲಿದೆ ಎಂದು ಬಳಕೆದಾರರು ಆತಂಕಗೊಂಡಿದ್ದರು. ಇನ್ನು ನಿನ್ನೆಯಿಂದ ವಾಟ್ಸ್ಆ್ಯಪ್ ಪಿಂಕ್ ಲಿಂಕ್ನಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಬಳಕೆದಾರರು ಇದೀಗ ಇನ್ನೊಮ್ಮೆ ಆತಂಕಪಡುವ ಮತ್ತೊಂದು ಪ್ರಸಂಗ ಎದುರಾಗಿದೆ.
ವಾಟ್ಸ್ಆ್ಯಪ್ ಅಪ್ಲಿಕೇಷನ್ನಲ್ಲಿ ಬಹಳಷ್ಟು ದೌರ್ಬಲ್ಯಗಳು ಇವೆ ಎಂಬುದಾಗಿ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ) ಎಚ್ಚರಿಕೆ ನೀಡಿದೆ. ವಾಟ್ಸ್ಆ್ಯಪ್ ಹಾಗೂ ವಾಟ್ಸ್ಆ್ಯಪ್ ಬಿಜಿನೆಸ್ ಆ್ಯಪ್ಗಳ ಪೈಕಿ ಆ್ಯಂಡ್ರಾಯ್ಡ್ನ v2.21.4.18 ವರ್ಷನ್ಗೂ ಮೊದಲಿನ ಹಾಗೂ ಐಒಎಸ್ನ v2.21.32 ವರ್ಷನ್ಗೂ ಮೊದಲಿನವುಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಅದು ತಿಳಿಸಿದೆ.
ಈ ವರ್ಷನ್ನ ವಾಟ್ಸ್ಆ್ಯಪ್ ಹಾಗೂ ವಾಟ್ಸ್ಆ್ಯಪ್ ಬಿಜಿನೆಸ್ ಆ್ಯಪ್ಗಳಿಂದ ಹ್ಯಾಕರ್ಸ್ ಬಳಕೆದಾರರ ಖಾಸಗಿ ಹಾಗೂ ಸೂಕ್ಷ್ಮ ಮಾಹಿತಿಯನ್ನು ಆ್ಯಕ್ಸೆಸ್ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಸುರಕ್ಷತೆ ದೃಷ್ಟಿಯಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆ್ಯಪ್ಸ್ಟೋರ್ಗೆ ಹೋಗಿ ಲೇಟೆಸ್ಟ್ ವರ್ಷನ್ ಅಪ್ಡೇಟ್ ಮಾಡಿಕೊಳ್ಳುವುದು ಸೂಕ್ತ ಎಂದೂ ಸಿಇಆರ್ಟಿ ಸಲಹೆ ನೀಡಿದೆ. (ಏಜೆನ್ಸೀಸ್)