

ಕೆ.ಎಂ.ದೊಡ್ಡಿ: ಪಟ್ಟಣದ ಮಧ್ಯಭಾಗದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿಯ ಜಾಗದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸುಮಾರು 75 ವರ್ಷಗಳ ಹಳೆಯ ಕಚೇರಿಯ ಕಟ್ಟಡದ ಸ್ಥಿತಿಗತಿಗಳನ್ನು ಗಮನಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಹಾಗೂ ಸಿಬ್ಬಂದಿ ಜತೆಗೂಡಿ ಕಾಮಗಾರಿ ನಿರ್ಮಾಣ ಯೋಜನೆಯ ಬಗ್ಗೆ ಮಾಹಿತಿ ಪಡೆದು, ಸ್ಥಳ ವೀಕ್ಷಣೆ ನಡೆಸಿ ಮಾತನಾಡಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮತ್ತು ಲೋಕೋಪಯೋಗಿ ಇಲಾಖೆ ಕಚೇರಿಯನ್ನು ಪೂರ್ಣ ನೆಲಸಮ ಮಾಡಿ ಹೊಸದಾಗಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದೇ ಸೂರಿನಡಿ ಹಲವು ಕಚೇರಿಗಳು ಬರಲಿವೆ ಎಂದು ವಿವರಿಸಿದರು.
ಬಹುಮಹಡಿ ಕಟ್ಟಡದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಉಪತಹಸೀಲ್ದಾರ್ ಕಚೇರಿ, ಕಂದಾಯ ಅಧಿಕಾರಿಗಳ ಕಚೇರಿ, ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಒಂದೇ ಸೂರಿನಡಿ ಲಭ್ಯವಾಗುವುದು. ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮದ್ದೂರು ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಅದರ ಭಾಗವಾಗಿ ಕೆ.ಎಂ.ದೊಡ್ಡಿಯಲ್ಲಿ ಸುಮಾರು 75 ವರ್ಷಗಳ ಹಳೆಯ ಕಚೇರಿಯ ಕಟ್ಟಡವು ನಿರ್ಲಕ್ಷ್ಯಕ್ಕೆ ಒಳಗಾಗಿ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದು ಆ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ವಿನ್ಯಾಸದಲ್ಲಿ ಸುಮಾರು 4 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಕಾವೇರಿ ನೀರಾವರಿ ಉಪ ವಿಭಾಗದ ಕಚೇರಿ ಸೇರಿದಂತೆ ಬಹುಮಹಡಿ ಕಟ್ಟಡ ನಿರ್ಮಾಣಗೊಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜೂ.20 ರಂದು ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ನಂತರ ಶೀಘ್ರದಲ್ಲೇ ಕಟ್ಟಡ ಕಾಮಗಾರಿಯನ್ನು ಆರಂಭಿಸಿ ಉತ್ತಮ ಗುಣಮಟ್ಟದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಕಾವೇರಿ ನೀರಾವರಿ ನಿಗಮದ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಪೂಜಾರಿ ಮಹೇಶ್, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.