ಉಡುಪಿ: ಜನಪ್ರಿಯ ಕಾದಂಬರಿಗಳು ಸಮಕಾಲೀನ ಜನಜೀವನದ ಬಗ್ಗೆ ಬೆಳಕು ಚೆಲ್ಲುತ್ತವೆ. ಕರಾವಳಿ ಭಾಗದ ಪ್ರಸಿದ್ಧ ಲೇಖಕರ 50 ವರ್ಷಗಳ ಕಾದಂಬರಿಗಳನ್ನು ಅವಲೋಕಿಸಿದರೆ ಇಲ್ಲಿನ ಜನರ ನಾಡಿಮಿಡಿತ ಅರಿವಾಗುತ್ತದೆ. ಸಂಶೋಧನೆಗಳಿಗೂ ಪೂರಕ ಮಾಹಿತಿ ಲಭಿಸುತ್ತದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.
ಶನಿವಾರ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ (ಮಾಹೆ) ಆಶ್ರಯದಲ್ಲಿ ಪ್ರಸಿದ್ಧ ಕಾದಂಬರಿಕಾರ ಕೆ.ಟಿ. ಗಟ್ಟಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಜಾತಿ ಪ್ರೇಮಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ತಮ್ಮ ಜಾತಿಯೊಳಗಿನ ಕೆಟ್ಟ ವಿಚಾರಗಳನ್ನು ವಿರೋಧಿಸುವ ಗುಣ ಕಡಿಮೆಯಾಗುತ್ತಿದೆ. ಆದರೆ ಮುಳಿಯ ತಿಮ್ಮಪ್ಪಯ್ಯ ಅವರು ಇದಕ್ಕೆ ವ್ಯತಿರಿಕ್ತವಾಗಿದ್ದರು. ಹೀಗಾಗಿ ಜಾತಿ ಕಾರಣಕ್ಕಾಗಿ ಅಲೋಚನೆಗಳನ್ನು ಒತ್ತೆ ಇಡಬಾರದು. ಜನರು ಸೈದ್ಧಾಂತಿಕ ಪರಿಧಿಯಿಂದ ಹೊರಗೆ ಬಾರದೇ ಇದ್ದರೆ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಕೆ.ಟಿ.ಗಟ್ಟಿ, ಮನುಷ್ಯನಲ್ಲಿರುವ ಗುಣ ಮುಖ್ಯವೇ ಹೊರತು ಜಾತಿ ಅಥವಾ ಧರ್ಮವಲ್ಲ. ಜಾತಿಯ ಕಾರಣಕ್ಕಾಗಿ ಯಾವುದೇ ವ್ಯಕ್ತಿಗೆ ವಿಶೇಷ ಗೌರವ ಅಥವಾ ಪ್ರತ್ಯೇಕ ಸ್ಥಾನಮಾನವನ್ನು ನೀಡುವುದು ಸಲ್ಲದು ಎಂದು ಹೇಳಿದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್, ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಮನೋರಮ ಎಂ. ಭಟ್, ಆರ್‌ಆರ್‌ಸಿ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಮುಳಿಯ ರಾಘವಯ್ಯ, ಮುಳಿಯ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.