

ಮುಳಬಾಗಿಲು : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹತೀರ್ಥದ ಬಳಿ 500 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, 48 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಕ್ರೀಡಾಂಗಣ, ಕೆಜಿಎಫ್ ಬೈಪಾಲ್ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಜಿಲ್ಲೆಯಲ್ಲೇ ಮುಳಬಾಗಿಲು ಪ್ರಜ್ವಲಿಸುವಂತೆ ಮಾಡಲಾಗುವುದು ಎಂದು ಶಾಸಕ ಎಚ್.ನಾಗೇಶ್ ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಎಸ್‌ಆರ್ ನಿಧಿಯಲ್ಲಿ ಮುಳಬಾಗಿಲು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ 50 ಲಕ್ಷ ರೂ. ವೆಚ್ಚದ ಅಕ್ಸಿಜನ್ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಈ ಘಟಕದಿಂದ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ರೋಗಿಗಳಿಗೆ ಆಕ್ಸಿಜನ್ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿ ಉಳಿಯತ್ತದೆ. 1 ನಿಮಿಷಕ್ಕೆ 500 ಲೀಟರ್ ಆಮ್ಲಜನಿಕ ಉತ್ಪಾದನೆಯಾಗುತ್ತಿದೆ. ಇದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.
ಹಳೇ ನ್ಯಾಯಾಲಯ ಕಟ್ಟಡದಲ್ಲಿ ಸ್ಥಾಪನೆ ಮಾಡಿರುವ ಕರೊನಾ ಆಸ್ಪತ್ರೆಯಲ್ಲಿ 80 ಹಾಸಿಗೆಗಳಿದ್ದು, 20 ಮಕ್ಕಳಿಗೆ ಮೀಸಲಿಡಲಾಗಿದೆ. ಇಲ್ಲಿಯೂ ಆಕ್ಸಿಜನ್ ಘಟಕ ಅಳವಡಿಸಿದ್ದು, ಶೀಘ್ರ ಲೋಕಾರ್ಪಣೆಗೊಳಿಸಿ ಕರೊನಾ 3ನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಆರೋಗ್ಯವೇ ಮಹಾಭಾಗ್ಯವಾಗಿದ್ದು, ಇದನ್ನು ಹಣದಿಂದ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಆಹಾರ ಸೇವನೆ ಜತೆಗೆ ನಿತ್ಯ ಯೋಗಾಭ್ಯಾಸ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ತಾಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಭೂ ಮಂಜೂರಾತಿ ಸದಸ್ಯ ಆರ್.ಪೆದ್ದಪ್ಪಯ್ಯ, ನಗರಸಭೆ ಸದಸ್ಯ ಎಂ.ಎಸ್.ಮಂಜುನಾಥ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಭಾರತಿ, ವೈದ್ಯರಾದ ಡಾ.ಶರತ್‌ಚಂದ್ರ, ಡಾ.ಕೆ.ಆರ್.ಮನು, ಡಾ.ಅಶ್ವಿನಿ, ಡಾ.ಶೆಲ್ವಿ ಕಲಾಸುಮತಿ, ಡಾ.ಸುಮಾ, ಟಿಎಚ್‌ಒ ಡಾ.ಕೆ.ಎಂ.ವರ್ಣಶ್ರೀ ಇತರರು ಇದ್ದರು.
ಶೀಘ್ರ ಕೆಸಿ ವ್ಯಾಲಿಗೆ ಚಾಲನೆ: ಕೆ.ಸಿ. ವ್ಯಾಲಿ ನೀರು ಮುಳಬಾಗಿಲು ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮಕ್ಕೆ 2-3 ದಿನಗಳಲ್ಲಿ ಚಾಲನೆ ನೀಡಲಾಗುವುದು. ಸಚಿವರು, ಸಂಸದರು, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ. ಮುಳಬಾಗಿಲು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ನಾಗೇಶ್ ತಿಳಿಸಿದರು.