ಮದುವೆಗೂ ಮುನ್ನ ಆರೋಗ್ಯ ಸಮಸ್ಯೆ ತೋಡಿಕೊಂಡ ಅನಂತ್​; ಮಗನ ಮಾತಿಗೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ

WhatsApp Image 2024-03-02 at 3.08.16 PM
Published on

ಗುಜರಾತ್: ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ಪುತ್ರ ಅನಂತ್ ಅಂಬಾನಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಂತೆ ಭಾವುಕರಾದ ರಿಲಯನ್ಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ, ಮಗನ ಮಾತುಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ರಾಧಿಕಾ ಮರ್ಚೆಂಟ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅವರ ಮೂರು ದಿನಗಳ ಅದ್ಧೂರಿ ಪೂರ್ವ ವಿವಾಹ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದಾರೆ.

ಆಯೋಜನೆ ಮಾಡಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಮಾತನಾಡಿದ ಅನಂತ್, ಈ ಒಂದು ಸಂದರ್ಭವನ್ನು ಮತ್ತಷ್ಟು ವಿಶೇಷ ಮಾಡಿದ್ದಕ್ಕಾಗಿ ತಮ್ಮ ಪೋಷಕರಿಗೆ ಧನ್ಯವಾದ ತಿಳಿಸಿದರು. ಬಾಲ್ಯದಲ್ಲಿ ಎದುರಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ಈ ಮೂಲಕ ನನ್ನ ಕುಟುಂಬವು ನನಗೆ ತುಂಬ ವಿಶೇಷ ಭಾವನೆ ಕೊಟ್ಟಿದೆ. ಆದರೆ ನನ್ನ ಜೀವನವು ಗುಲಾಬಿಗಳ ಹಾಸಿಗೆಯಂತಿಲ್ಲ. ನಾನು ಮುಳ್ಳಿನಿಂದ ಉಂಟಾಗುವಂತ ನೋವನ್ನು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ನನ್ನ ತಂದೆ-ತಾಯಿ ಮಾತ್ರ ಎಂದಿಗೂ ನನ್ನ ಕೈ ಬಿಡಲಿಲ್ಲ" ಎಂದರು.

"ನಾನು ಇಂತಹ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ಆಗ ಸದಾ ನನ್ನ ಬೆಂಬಲಕ್ಕೆ ನಿಂತಿದ್ದು ಕುಟುಂಬದವರು" ಎಂದು ಅನಂತ್ ಹೇಳಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದ ಮುಖೇಶ್ ಅಂಬಾನಿ ಪುತ್ರನನ್ನು ನೋಡುತ ಕಣ್ಣೀರಿಟ್ಟಿದ್ದಾರೆ.

ಮೂರು ದಿನಗಳ ಅದ್ದೂರಿ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ವಿಶ್ವದ ಪ್ರಮುಖ ಶ್ರೀಮಂತ ವ್ಯಕ್ತಿಗಳು ಸೇರಿದಂತೆ 1,000ಕ್ಕೂ ಹೆಚ್ಚು ಅತಿಥಿಗಳು ಹಾಜರಾಗಿದ್ದಾರೆ. ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಸೇರಿದಂತೆ ಖ್ಯಾತ ಬಾಲಿವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net