ಯಾರಾಗ್ತಾರೆ ಮುಖೇಶ್​ ಅಂಬಾನಿ ಉತ್ತರಾಧಿಕಾರಿ? ಉತ್ತರ ಅಷ್ಟೊಂದು ಸುಲಭವಲ್ಲ; ರಚನೆಯಾಗಲಿದೆ ಕೌಟುಂಬಿಕ ಮಂಡಳಿ

mukesh ambani
Published on

ಮುಂಬೈ: ರಿಲಾಯನ್ಸ್​ ಇಂಡಸ್ಟ್ರೀಸ್​ ಚೇರಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಈಗ ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ. ಜಗತ್ತಿನ 167 ದೇಶಗಳಿಗಿಂತಲೂ ಇವರ ಸಂಪತ್ತು ಹೆಚ್ಚಾಗಿದೆ. ಈ ಸಂಪತ್ತಿನ ವಾರಸ್ದಾರರು ಅಥವಾ ರಿಲಾಯನ್ಸ್​ ಇಂಡಸ್ಟ್ರೀಸ್​ನ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕುತೂಹಲಕಾರಿ.

ತಂದೆ ಧೀರುಬಾಯ್​ ಅಂಬಾನಿ ಸ್ಥಾಪಿಸಿದ್ದ ಸಾಮ್ರಾಜ್ಯಕ್ಕಾಗಿ ಸಹೋದರರಾದ ಮುಖೇಶ್​ ಅಂಬಾನಿ ಹಾಗೂ ಅನಿಲ್​ ಅಂಬಾನಿ ನಡುವೆ ಉಂಟಾಗಿದ್ದ ಕಲಹ ಕೊನೆಗೆ ಆಸ್ತಿ ವಿಭಜನೆಯಲ್ಲಿ ಕೊನೆಗೊಂಡಿತ್ತು. ಇದೇ ಆತಂಕವೀಗ ಮುಖೇಶ್​ ಅಂಬಾನಿಗೂ ಎದುರಾಗಿರಲಿಕ್ಕೂ ಸಾಕು.

ಈ ಕಾರಣಕ್ಕಾಗಿಯೇ ಉತ್ತರಾಧಿಕಾರಿ ಯೋಜನೆಯನ್ನು ಮುಖೇಶ್​ ಅಂಬಾನಿ ರೂಪಿಸುತ್ತಿದ್ದಾರೆ. ಇದಕ್ಕಾಗಿ ಕೌಟುಂಬಿಕ ಮಂಡಳಿಯೊಂದನ್ನು ರಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. ತೈಲೋದ್ಯಮ, ಟೆಲಿಕಾಂ ಹಾಗೂ ರಿಟೇಲ್​ ಮೊದಲಾದ ಕ್ಷೇತ್ರಗಳನ್ನು ಒಳಗೊಂಡಿರುವ ಉದ್ಯಮ ಸಾಮ್ರಾಜ್ಯದ ನಿರ್ವಹಣೆಗೆ ಸಾಮೂಹಿಕ ಆಡಳಿತ ರಚನೆಯ ಸ್ವರೂಪವನ್ನು ಇದು ನಿರ್ಧರಿಸಲಿದೆ ಎಂದು ಹೇಳಲಾಗಿದೆ.

ಕೌಟುಂಬಿಕ ಮಂಡಳಿಯಲ್ಲಿ ಕುಟುಂಬದ ಸದಸ್ಯರಿಗೆ ಸಮಾನ ಪ್ರಾತಿನಿಧ್ಯವಿರಲಿದೆ. ಕುಟುಂಬದ ವಯಸ್ಕರು ಹಾಗೂ ಮೂವರು ಮಕ್ಕಳು ಇದರಲ್ಲಿರಲಿದ್ದಾರೆ. ಕುಟುಂಬದ ಹೊರಗಿನವರು ಮಹಾಪೋಷಕರಾಗಿರಲಿದ್ದಾರೆ ಎಂದು ತಿಳಿದು ಬಂದಿದೆ.

ರಿಲಾಯನ್ಸ್​ ಇಂಡಸ್ಟ್ರೀಸ್​ನ ನಿರ್ಧಾರಗಳಲ್ಲಿ ಈ ಮಂಡಳಿ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ಕುಟುಂಬ ಹಾಗೂ ವಹಿವಾಟುಗಳ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಯಾವುದೇ ಬಿಕ್ಕಟ್ಟು, ಕಲಹ ಎದುರಾದರೂ ಅದನ್ನು ಬಗೆಹರಿಸಲಿದೆ ಎಂದು ಹೇಳಲಾಗಿದೆ.
ಮುಖೇಶ್​ ಅಂಬಾನಿಗೆ ಈಗ 63 ವರ್ಷವಾಗಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಈ ಉತ್ತರಾಧಿಕಾರಿ ಯೋಜನೆಯ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಮುಖೇಶ್​ ಅಂಬಾನಿಗೆ ಮೂವರು ಮಕ್ಕಳಿದ್ದು, ಈಗಾಗಲೇ ಆಕಾಶ್​ ಹಾಗೂ ಇಶಾ ಅಂಬಾನಿ ರಿಲಾಯನ್ಸ್​ ಜಿಯೋ ಹಾಗೂ ರಿಲಾಯನ್ಸ್​ ರಿಟೇಲ್​ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ಮಗ ಅನಂತ್​ ಜಿಯೋ ಫ್ಲಾಟ್​ಫಾರ್ಮ್​ಗೆ ಸಹ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇನ್ನೊಂದೆಡೆ, ರಿಲಾಯನ್ಸ್​ ಪ್ರತಿಷ್ಠಾನವನ್ನು ಮುನ್ನಡೆಸುವಲ್ಲಿ ತಾಯಿ ನೀತಾ ಅಂಬಾನಿಗೆ ಇಶಾ ನೆರವಾಗುತ್ತಿದ್ದಾರೆ.
ರಿಲಾಯನ್ಸ್​ನ ಇಂಧನ, ರಿಟೇಲ್​ ಹಾಗೂ ಡಿಜಿಟಲ್ ಕ್ಷೇತ್ರವನ್ನು ಒಬ್ಬೊಬ್ಬರು ನೋಡಕೊಳ್ಳುವ ಅಥವಾ ಹಂಚಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net