

ವಿಜಯಪುರ : ನಮ್ಮ ದೇಶದಲ್ಲಿ ಜನರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಅಂತಹ ಹಬ್ಬಗಳಲ್ಲಿ ಭಾವೈಕ್ಯತೆ ಸಾರುವ ಮೊಹರಂ ಹಬ್ಬವು ಯಾವುದೇ ತಾರತಮ್ಯತೆ ಇಲ್ಲದೆ ಹಿಂದು-ಮುಸ್ಲಿಂ ಪಾಲ್ಗೊಂಡು ಆಚರಿಸುತ್ತಾ ಬರುತ್ತಾರೆ ಎಂದು ಹಾಸಿಂಪೀರ ದರ್ಗಾದ ಪೀಠಾಧ್ಯಕ್ಷ ಸೈಯದ್ ಷಹಾ ಮುರ್ತುಜಾ ಹುಸೇನಿ ಹಾಶ್ಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಡಿಕಮಾನ ರಸ್ತೆ ಹತ್ತಿರದ ಹಾಸಿಂಪೀರ ದರ್ಗಾದಲ್ಲಿ ಮಂಗಳವಾರ ಮೊಹರಂ ನಿಮಿತ್ತ ಹಜರತ ಇಮಾಮ ಹುಸೇನರ ಡೋಲಿ ದರ್ಶನ ಪಡೆದು ಮಾತನಾಡಿದ ಅವರು, ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ ಪೈಗಂಬರರ ಎರಡನೇ ಮೊಮ್ಮಗ ಇಮಾಮ ಹುಸೇನ ಖಲೀಫ ಪಟ್ಟಕ್ಕೆ ಬರಬೇಕಾಗಿತ್ತು. ಯಜೀದನು ತಾನೇ ಖಲೀಫನೆಂದು ಸಾರಿಕೊಂಡನು. ಈ ಅನ್ಯಾಯವನ್ನು ಇಮಾಮ ಹುಸೇನರು ಪ್ರತಿಭಟಿಸಿದರು. ಆದರೂ ಯಜೀದನು ಪ್ರಭುತ್ವವನ್ನು ಮನ್ನಿಸಲು ನಿರಾಕರಿಸಿದನು. ಸತ್ಯ ನ್ಯಾಯ ಕಾಪಾಡಲು ಇಮಾಮ ಹುಸೇನರು ಮೊಹರಂ ತಿಂಗಳ ಹತ್ತನೇಯ ದಿನ ಕರಬಲಾ ಎಂಬ ಮರುಭೂಮಿ ಮೈದಾನದ ಯುದ್ಧದಲ್ಲಿ ಇಮಾಮ ಹುಸೇನ ಹುತಾತ್ಮರಾದರು. ಶಾಂತಿ ಹಾಗೂ ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ ಇಮಾಮ ಹುಸೇನರ ಪುಣ್ಯ ಸ್ಮರಣೆಗೊಸ್ಕರ ಈ ಹಬ್ಬ ವಿಶ್ವಾದ್ಯಂತ ಆಚರಿಸುತ್ತಾರೆ ಎಂದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಇಸ್ಲಾಮಿಯರ ಹೊಸ ವರ್ಷ ಆರಂಭದ ಹತ್ತನೇಯ ದಿನ ಇಮಾಮ ಹುಸೇನ ಹಾಗೂ ಇಮಾಮ ಹುಸೇನ ಅವರ ಪುಣ್ಯ ಸ್ಮರಣೆಗೆ ಅಲಾಯಿ ಅಂತ ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಆಚರಿಸುತ್ತಾರೆ. ಎಲ್ಲಿಯವರೆಗೆ ಮೊಹರಂ ಆಚರಣೆ ಮಾಡುತ್ತಾರೆ ಅಲ್ಲಿಯವರೆಗೆ ದೇಶದಲ್ಲಿ ಸಾಮರಸ್ಯ ಹಾಗೂ ಸಹೋದರತೆಯ ಭಾವನೆ ಗಟ್ಟಿಯಾಗಿರುತ್ತದೆ. ಧರ್ಮ, ಸತ್ಯ, ನ್ಯಾಯ, ನಂಬಿಕೆಯಿಟ್ಟು ಬದುಕಿದವರು ಶ್ರೇಷ್ಠ ಮಾನವರಾಗುತ್ತ್ತಾರೆ. ಹಬ್ಬಗಳು ಮಾನವೀಯತೆ ಸಾರುತ್ತವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಆಚರಣೆಯಲ್ಲಿ ಬಹುಪಾಲು ಹಿಂದುಗಳೇ ಆಗಿರುವುದು ಐಕ್ಯತೆಯ ಸಂಕೇತ. ಈ ಹಬ್ಬದಲ್ಲಿ ಪ್ರಾದೇಶಿಕ ಜಾನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ಲಕ್ಷಣಗಳನ್ನು ಕಾಣಲು ಸಾಧ್ಯ ಎಂದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜೈನುಲ್ ಆಬಿದ್ದೀನ ಪೀರಜಾದೆ, ನೂರುದ್ದೀನ ಪಾಷಾ ಜಹಾಗೀರದಾರ, ನ್ಯಾಯವಾದಿ ಇಂತಿಕಾಬ ಇಂಡಿಕರ, ಇಸ್ಲಾಂ ಬಾಂಗಿ, ದಾವಲ ಬಾಲೋನಿಕರ, ಅಬುಬಕರ ಬಾಡಗಂಡಿ, ಅಬುಲ್ ಫೈಜ ಖಾದ್ರಿ, ಸೈಯದ್ ಹಾಸಿಂಪೀರ ಪೀರಜಾದೆ. ಅಲ್ತಾ ಖಾದ್ರಿ ಇನಾಮದಾರ, ರಾಜಾ ಜಾನವೇಕರ ಮುಂತಾದವರು ಉಪಸ್ಥಿತರಿದ್ದರು.