ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮೊಹರಂ ಆಚರಣೆ

mohram
ಮೊಹರಂ ಅಂಗವಾಗಿ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಸಜ್ಜಾಗಿರುವ ಮುಸ್ಲಿಂ ಸಮಾಜದವರು.
Published on

ಶಿವಮೊಗ್ಗ: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಮೊಹರಂನ್ನು ಮುಸ್ಲಿಂ ಸಮಾಜದವರು ಜಿಲ್ಲೆಯ ವಿವಿಧೆಡೆ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಮ್ಮ ದೇಹವನ್ನು ದಂಡಿಸಿಕೊಂಡರು. ಯಜೀದ್‌ನ ದುರ್ನಡತೆಯ ವಿರುದ್ಧ ಹೋರಾಡಿ ಪ್ರಾಣ ಕೊಟ್ಟ ಹಜರತ್ ಇಮಾಂ ಹುಸೇನ್ ಮತ್ತು 72 ಜನ ಸಂಗಡಿಗರು ಹುತಾತ್ಮರಾಗಿ ಇಸ್ಲಾಂ ಧರ್ಮ, ಸತ್ಯ, ನ್ಯಾಯದ ತತ್ವವನ್ನು ಉಳಿಸಿದ್ದರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ 10ನೇ ಮೊಹರಂ ದಿನವನ್ನು ಶೋಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಶೋಕಾಚರಣೆ ಮೂಲಕ ಹುತಾತ್ಮರಾದ ಕುಟುಂಬ-ಸಂಗಡಿಗರಿಗೆ ಶ್ರದ್ದಾಂಜಲಿ ಅರ್ಪಿಸಲಾಗುತ್ತದೆ.
ಶೋಕಾಚರಣೆಯಲ್ಲಿ ಹಿರಿಯರು, ಯುವಕರು, ಮಕ್ಕಳು ಪಾಲ್ಗೊಂಡು ತಮ್ಮ ದೇಹವನ್ನು ದಂಡಿಸಿಕೊಂಡರು. ನಗರದ ವಿವಿಧ ಬಡಾವಣೆಗಳಲ್ಲಿ ಮುಸ್ಲಿಂ ಸಮಾಜದವರು ಕೆಂಡ ಹಾಯ್ದು, ಪಂಜಾದ ಮೆರವಣಿಗೆ ನಡೆಸಿದರು. ಕೆಲ ಮಸೀದಿಗಳಲ್ಲಿ ವಿಶೇಷ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು. ಅಮೀರ್ ಅಹಮದ್ ವೃತ್ತದಲ್ಲಿನ ದರ್ಗಾದಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net