ಶ್ರೀ ತ್ರಿಪುರ ಸುಂದರಿ ಜಾತ್ರೆಗೆ ಚಾಲನೆ

20240125_142744
Published on

ಮೂಗೂರು: ಹಳೆಯ ಮೈಸೂರು ಭಾಗದಲ್ಲಿ ಮೂಗೂರು ಬಂಡಿ ಎಂದೇ ಪ್ರಖ್ಯಾತಿ ಪಡೆದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಗುರುವಾರ ವಿಜೃಂಭಣೆಯಿಂದ ಆರಂಭಗೊಂಡಿತು.


5 ದಿನಗಳು (ಜ.29ರವರೆಗೆ ) ಜರುಗಲಿರುವ ಜಾತ್ರಾ ಮಹೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.


ರೈತರು ಬಂಡಿ ಬೀದಿಯ 2 ಕಡೆಗಳಲ್ಲೂ ತಮ್ಮ ಬಂಡಿ ಓಟದ ಸರದಿಗಾಗಿ ಬಿಸಿಲನ್ನು ಲೆಕ್ಕಿಸದೆ ಕಾದು ನಿಂತಿದ್ದರು. ಎತ್ತುಗಳನ್ನು ಸಿಂಗರಿಸಿದ್ದರು. ಬಂಡಿಯ ಅಂಗವಾಗಿ ಅಮ್ಮನವರ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆ 11 ಗಂಟೆಗೆ ಉತ್ಸವ ಮೂರ್ತಿಯನ್ನು ದೇಗುಲದಲ್ಲಿ ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಹರಕೆ ಹೊತ್ತವರು ಬಂಡಿಗೆ ಈಡುಗಾಯಿ ಒಡೆದರು.


ರುದ್ರಾಕ್ಷಿ ಮಂಟಪದ ಉತ್ಸವದೊಂದಿಗೆ ಬಂಡಿ ಮಂಟಪಕ್ಕೆ ತಲುಪುತ್ತಿದ್ದಂತೆ ದಾರಿಯುದ್ದಕ್ಕೂ ಪೂಜಾ ಬಂಡಿಗೆ ಭಕ್ತರು ಹೂ ಚೆಲ್ಲಿ ನಮಿಸಿದರು. ನಂತರ ಮೊದಲ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಜನರು ಬಂಡಿ ಓಟ ನೋಡಲು ಕಾದು ಕುಳಿತಿದ್ದರು.


39 ವರ್ಷಗಳಿಂದಲೂ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮಸ್ಥರು, ಶ್ರೀ ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿ ಸಹಯೋಗದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 5 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಯೋಜಿಸಿದ್ದಾರೆ. ಮುಖ್ಯ ರಸ್ತೆ, ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net