ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ

Muguru Photo 2
Published on

ದೇವಿ ಉತ್ಸವ ಕಣ್ತುಂಬಿಕೊಂಡ ಅಪಾರ ಭಕ್ತಸಾಗರ

ವಿಜಯವಾಣಿ ಸುದ್ದಿಜಾಲ ಮೂಗೂರು(ತಿ.ನರಸೀಪುರ)
ಇತಿಹಾಸ ಪ್ರಸಿದ್ಧ ಮೂಗೂರು ಗ್ರಾಮ ದೇವತೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವ ಜರುಗಿತು.
ಶಾಸಕ ಅಶ್ವಿನ್ ಕುಮಾರ್, ತಹಸೀಲ್ದಾರ್ ನಾಗೇಶ್ ಸೇರಿದಂತೆ ಇತರ ಗಣ್ಯರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರಿಂದ ತ್ರಿಪುರ ಸುಂದರಿ ತಿಬ್ಬಮ್ಮ ಕಾಪಾಡಮ್ಮ ಎಂಬ ಜಯಘೋಷ ಮೊಳಗಿಸಿದರು. ಪ್ರಮುಖ ಬೀದಿಯಲ್ಲಿ ರಥ ಎಳೆದ ಅಪಾರ ಭಕ್ತರು ಹಣ್ಣು ದವನ, ಹೂ ಎಸೆದು ಇಷ್ಟಾರ್ಥ ಈಡೇರಿಕೆಗೆ ಬೇಡಿದರು.
ಬಿರು ಬಿಸಲನ್ನೂ ಲೆಕ್ಕಿಸದ ಭಕ್ತರು ಮಹಾ ರಥೋತ್ಸವದ ದೃಶ್ಯಗಳನ್ನು ಕಣ್ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಪ್ರಸಾದ ವಿನಿಯೋಗ ನಡೆಸಿದರು. ಬೆಂಗಳೂರಿನ ನಿವಾಸಿ ದೇವಿ ಎಲೆಕ್ಟ್ರಾನಿಕ್ಸ್ ಮಾಲೀಕ ಹರೀಶ್ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಿದರು. ಮಂಡ್ಯ ಜಿಲ್ಲೆ ಬ್ಯಾಡರಹಳ್ಳಿ ಗ್ರಾಮದ ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿಯವರು ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದರು. ಪ್ರತಿ ವರ್ಷದಂತೆ ಮೂಗೂರು ಗೆಳೆಯರ ಬಳಗದ ವತಿಯಿಂದ ರಥಕ್ಕೆ ಬೃಹತ್ ಹೂವಿನ ಹಾರ ಅರ್ಪಿಸಲಾಯಿತು.
ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗ್ರಾ.ಪಂ ಸದಸ್ಯ ದಿಲೀಪ್ ಕುಮಾರ್, ಗೌಡ್ರು ಜಗದೀಶ ಮೂರ್ತಿ, ದೇವಸ್ಥಾನ ಮಂಡಳಿ ಅಧ್ಯಕ್ಷ ಗೌಡ್ರು ನಾಗರಾಜು, ತಾ.ಪಂ ಸದಸ್ಯ ಎಂ.ಚಂದ್ರಶೇಖರ್, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಕೆ.ಪಿ.ಎಸ್. ಶಾಲೆ ಉಪಾಧ್ಯಕ್ಷ ಎಂ.ಕೆ. ಸಿದ್ದರಾಜು, ಮೂಗೂರು ಸಿದ್ದರಾಜು, ಪಾರು ಪತ್ತೇದಾರ್ ಎಂ.ಬಿ. ಸಾಗರ್, ಡೇರಿ ನಾಗೇಂದ್ರ, ಯುವ ಮುಖಂಡರಾದ ನಾಗೇಂದ್ರ, ಶಿವಮೂರ್ತಿ, ರೇವಣ್ಣ, ಎಂ.ಪಿ.ಮರಿಸ್ವಾಮಿ, ಎಂ.ಎಂ. ಜಗದೀಶ್, ರಮೇಶ್ ನಾಯಕ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net