ಮುಡುಬ ಸಿದ್ದಾಪುರದಲ್ಲಿ ಮದ್ಯದಂಗಡಿಗೆ ವಿರೋಧ

IMG_0645
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಮುಡುಬ ಸಿದ್ದಾಪುರ ಗ್ರಾಮದಲ್ಲಿ ಎಂಎಲ್‌ಐಎಲ್ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಐದಾರು ಹಳ್ಳಿಯ ಗ್ರಾಮಸ್ಥರು ಡಿಸಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ಕೊಡಬಾರದು ಎಂದು ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ. ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದೇವೆ. ಆದರೂ ಎಂಎಸ್‌ಐಎಲ್ ತೆರೆಯಲು ಹೊರಟಿದ್ದಾರೆ. ಸಾರ್ವಜನಿಕರ ತಕರಾರುಗಳ ನಡುವೆ ಇಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿದರು.

ಮುಡುಬ ಸಿದ್ದಾಪುರ ಮಾತ್ರವಲ್ಲದೇ ಹುಣಸೇಕಟ್ಟೆ, ಮಲ್ಲಾಪುರ, ಬನ್ನೂರು, ಹೋತನಕಟ್ಟೆ, ಹಿರೇಕವಲತ್ತಿ ಗ್ರಾಮಗಳ ಜನರು ಇದೇ ಮದ್ಯದಂಗಡಿಗೆ ಬರುತ್ತಾರೆ. ಈ ಗ್ರಾಮಗಳಲ್ಲೂ ಬಡವರೇ ಹೆಚ್ಚಾಗಿದ್ದು ನೆಮ್ಮದಿಯಿಂದ ಇರುವ ಗ್ರಾಮಗಳಿಗೆ ಮದ್ಯದಂಗಡಿ ಅವಶ್ಯಕತೆ ಇಲ್ಲ. ಮದ್ಯ ಬೇಕು ಎಂದವರು ಪೇಟೆಗೆ ಹೋಗಲಿ. ಗ್ರಾಮಗಳನ್ನು ಕುಡಿತದ ಚಟಕ್ಕೆ ಬಲಿಕೊಡಲು ಸಿದ್ಧರಿಲ್ಲ ಎಂದರು.

ಸಂಸಾರಗಳನ್ನು ಬೀದಿಗೆ ತಳ್ಳುವ ಕೆಲಸವನ್ನು ಇಲ್ಲಿನ ಕೆಲವರು ಮಾಡುತ್ತಿದ್ದಾರೆ. ಹಣದಾಸೆಗೆ ಬಾಡಿಗೆ ಕೊಡಲು ಹೊರಟಿದ್ದಾರೆ. ಜನರ ನೆಮ್ಮದಿ ಹಾಳು ಮಾಡುವ ಮದ್ಯದಂಗಡಿಗೆ ಮಳಿಗೆಗಳನ್ನು ಕೊಡಬಾರದು ಎಂದು ಬಾಡಿಗೆದಾರರಿಗೆ ಮನವಿ ಮಾಡಿದರು.

ವಿರೋಧದ ನಡುವೆಯೂ ಮದ್ಯದಂಗಡಿ ತೆರೆಯಲು ಹೊರಟರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಗ್ರಾಮಸ್ಥರು, ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳೇ ಬರುವಂತೆ ಪಟ್ಟು ಹಿಡಿದರು. ಪೊಲೀಸರು ಮನವೊಲಿಸಿದ ಬಳಿಕ ಡಿಸಿ ಕಚೇರಿ ಅಧಿಕಾರಿಗೆ ಮನವಿ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಅಣ್ಣಪ್ಪ, ಮೋಹನ ಗೌಡ, ಶಾಂತಪ್ಪ, ಮಂಜಪ್ಪ, ಮಮತಾ, ಈರಮ್ಮ, ಪ್ರೇಮಾ, ಪರಮೇಶ್, ಕಲಾವತಿ ಸೇರಿ ನೂರಾರು ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net