

ಬೆಂಗಳೂರು:
ಪತ್ನಿಗೆ ಸೇರಿದ 3 ಎಕರೆ ಜಮೀನನ್ನು ಮೂಡಾದಿಂದ ಲೇಔಟ್ ಮಾಡುವ ತನಕ ಸಿಎಂ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದರು? ಇಡೀ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿರುವ ಕಾರಣ ಕೂಡಲೇ ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಮಾಜಿ ಸಿಎಂ ಮತ್ತು ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮದೇ ಜಮೀನು ಎಂದ ಮೇಲೆ ಅಲ್ಲಿ ಯಾಕೆ ಬೇಲಿ ಹಾಕಿರಲಿಲ್ಲ? ಬದಲಿ ನಿವೇಶನ ಕೇಳುವ ಕಾರಣಕ್ಕಾಗಿಯೇ ಮೌನವಾಗಿದ್ದರೆ? ಈಗ ನಮ್ಮದೇನು ಪಾತ್ರವಿಲ್ಲ ಎಂದರೆ ನಂಬಲು ಸಾಧ್ಯವೇ? ಎಂದು ಕೇಳಿದ್ದಾರೆ.
2009-10 ರಲ್ಲೂ ಭೂಸ್ವಾಧೀನ ಎಂದೇ ಪಹಣಿಯಲ್ಲಿ ಇದೆ. ಸಿಎಂ ಪತ್ನಿ ಹೆಸರಿಗೆ ಜಾಗ ಇದ್ದಿದ್ದರೆ ಭೂ ಸ್ವಾಧೀನ ಎನ್ನುವುದನ್ನು ಪಹಣಿಯಲ್ಲಿ ತೆಗೆದಿರಬೇಕಿತ್ತು. ಇವರದ್ದೇ ಜಮೀನು ಆಗಿದ್ದಾಗ ಲೇಔಟ್ ಮಾಡುವುದನ್ನು ತಡೆಯಬೇಕಿತ್ತು ಎಂದರು.
ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತಳುಕು ಹಾಕಿಕೊಳ್ಳಲು ಇದೆಲ್ಲವೂ ಕಾರಣವಿದೆ. ಆದರೂ, ನನ್ನದೇನು ತಪ್ಪಿಲ್ಲ ಅಂತ ಸಿಎಂ ಹೇಳ್ತಿದಾರೆ. 62 ಕೋಟಿ ರೂ ಪರಿಹಾರ ತನಗೆ ಸಿಗಬೇಕು ಎನ್ನುತ್ತಿದ್ದಾರೆ. ಭೂಸ್ವಾದಿನ ಆರಂಭಿಸಿ, ಬಳಿಕ ಒತ್ತಡ ಬಂದು ಡಿನೋಟಿಫಿಕೇಶನ್ ಮಾಡಿರುವ ಸಾಧ್ಯತೆ ಇದೆ ಎಂದು ಸಂಶಯಿಸಿದರು.
ಈ ಜಮೀನು ಮಲ್ಲಿಕಾರ್ಜುನಯ್ಯ ಅವರಿಂದ ಸೇಲ್ ಡೀಡ್ ಆಗಿದೆ. ಆದರೆ ಈ ಜಮೀನು ಹಿಂದೆ ನೋಟಿಫಿಕೇಶನ್ ಆಗಿದೆ. ಸಿಎಂ ಪತ್ನಿ ಹೆಸರಿಗೆ ಜಾಗ ಇದ್ದರೆ ಪಹಣಿಯಲ್ಲಿ ಭೂಸ್ವಾದೀನ ಅನ್ನೋದನ್ನ ತೆಗೆದಿರಬೇಕಿತ್ತು. ಆದರೆ ಆ ರೀತಿ ಆಗಿಲ್ಲ ಎಂದರು.
ಸಿಎಂ ಯಾವ ನಿಯಮದ ಆಧಾರದ ಮೇಲೆ ಸೈಟ್ ಕೇಳುತ್ತಾರೆ? ಕಮರ್ಷಿಯಲ್ ಸೈಟ್ ಕೂಡಾ ಕೇಳುವಂತಿಲ್ಲ. ಆದರೂ 14 ಸೈಟ್ ಪಡೆದಿರುವುದು ಕಾನೂನು ಬಾಹಿರ. ಸಿಎಂ ಗಮನದಲ್ಲಿದ್ದೂ ಇಷ್ಟೆಲ್ಲಾ ತಪ್ಪು ಮಾಡಿದ್ದಾರೆ. ಹಿಂದೆ ಇವರೇ ಅರ್ಕಾವತಿ ಬಡಾವಣೆಯನ್ನು ರೀ ಡೂ ಹೆಸರಲ್ಲಿ ಹಗರಣ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ನೀವು ಸರಿಯಾಗಿದ್ದಿದ್ದರೆ ಯಾಕೆ ಜನರ ಮುಂದೆ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿಲ್ಲ?
ಸಿಎಂ ವರ್ತನೆ ಎಲ್ಲವನ್ನೂ ಮುಚ್ಚಿ ಹಾಕುವ ರೀತಿ ಇದೆ. ನಿಯಮ ಮೀರಿ ಬದಲಿ ನಿವೇಶನ ಪಡೆದಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂಡಾ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಮಾಯಕರ ತರಹ ವರ್ತಿಸುತ್ತಿದ್ದಾರೆ. ಬಿಜೆಪಿ ಕಾಲದಲ್ಲಿ ನಡೆದಿರುವುದು ಅಂತಾರೆ. ಯಾರ ಕಾಲದಲ್ಲಿ ಆದರೂ ಡಿ ಫಾಲ್ಟರ್, ಡಿಫಾಲ್ಟರೇ. ಏನೇ ಆದರೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕು. ಜಮೀನಿಗೆ ಬೋರ್ಡ ಕೂಡಾ ಹಾಕದಿರುವುದು ಸಿದ್ದರಾಮಯ್ಯ ಅವರ ಜಾಣ ಕುರುಡುತನ ಎಂದರು.
50:50 ಹೆಸರಲ್ಲಿ 14 ಸೈಟ್ ಪಡೆದಿರುವುದು ಸರಿಯಲ್ಲ. ಏನೇ ಡಿಫಾಲ್ಟ್ ಇದ್ದರೂ ಒಂದು ಅಥವಾ ಎರಡು ಸೈಟ್ ಪಡೆಯಬೇಕು. ಇದರಲ್ಲಿ ಮುಡಾ ತಪ್ಪು ಇಲ್ಲ. ಸಿದ್ದರಾಮಯ್ಯ ಅವರ ಕುಟುಂಬದ್ದೇ ತಪ್ಪು. ಭೈರತಿ ಸುರೇಶ್ ಎಷ್ಟು ಫೈಲ್ ತಂದು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ? ಎನ್ನುವುದು ಬೆಳಕಿಗೆ ಬರಬೇಕು ಎಂದರು.
ಮುಡಾ ಹಗರಣ ಹೊರಬರುತ್ತಿದ್ದಂತೆಯೇ ವರದಿ ನೀಡಿದ ಪ್ರಾಮಾಣಿಕ ಡಿಸಿಯನ್ನು ವರ್ಗಾವಣೆ ಮಾಡಿದರು. ಅಲ್ಲಿರುವ ಎಲ್ಲಾ ದಾಖಲೆ ಗಂಟು ಮೂಟೆ ಕಟ್ಟಿ ಬೆಂಗಳೂರಿಗೆ ತಂದಿದ್ದಾರೆ ಎಂದರು.
ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಅವಧಿಯಲ್ಲಿ ಆದಷ್ಟು ಹಗರಣಗಳು ನಮ್ಮ ಸರ್ಕಾರದಲ್ಲಿ ಆಗಿಲ್ಲ ಅಂತಾರೆ, ಎಂದರೆ ಅವರೇ ಈ ಹಗರಣವನ್ನು ಒಪ್ಪಿಕೊಂಡಿದಾರೆ ಎಂದು ತಿರುಗೇಟು ನೀಡಿದರು.