

ಬೆಂಗಳೂರು: ಮುಡಾ ಹಗರಣ ಆರೋಪ ಸಂಬಂಧದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಆದೇಶವನ್ನು ಆ.13ಕ್ಕೆ ಕಾಯ್ದಿರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿಎಂ ಸೇರಿ ಐವರ ವಿರುದ್ಧ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಖಾಸಗಿ ದೂರು ಸಲ್ಲಿಸಿದ್ದರು. ವಿಶೇಷ ತನಿಖಾ ದಳ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ದೂರಿನಲ್ಲಿ ಕೋರಿದ್ದರು.
ಅರ್ಜಿಯನ್ನು ಶುಕ್ರವಾರ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಕೈಗೆತ್ತಿಕೊಂಡರು. ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿ, ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. 4,800 ಚದರಡಿ ಜಾಗ ಮಾತ್ರ ಪಡೆಯಬಹುದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಖಾಸಗಿ ದೂರು ಸಲ್ಲಿಕೆಗೂ ಮೊದಲು ಪೂರ್ವಾನುಮತಿ ಬೇಕಲ್ಲವೇ ಎಂದು ದೂರುದಾರರ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು. ಕೋರ್ಟ್ ತನಿಖೆಗೆ ಆದೇಶ ನೀಡಲು ಪೂರ್ವಾನುಮತಿ ಬೇಕಾಗಿಲ್ಲ. ಕೋರ್ಟ್ ಅಪರಾಧವನ್ನು ಪರಿಜ್ಞಾನಕ್ಕೆ ತೆಗೆದುಕೊಳ್ಳುವಾಗ ಮಾತ್ರ ಪೂರ್ವಾನುಮತಿ ಬೇಕು. 156(3) ಅಡಿ ತನಿಖೆಗೆ ಆದೇಶಿಸುವಾಗ ಪೂರ್ವಾನುಮತಿ ಬೇಡ. ಭ್ರಷ್ಟಾಚಾರ ತಡೆ ಕಾಯ್ದೆ, ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮಂಡಿಸಿದರು.