

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣದಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಶಿಕ್ಷೆಗೆ ಗುರಿ ಮಾಡಿದ್ದು, ಇದೀಗ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಕೆಳ ಹಂತದ ಅಧಿಕಾರಿಗಳಿಗೂ ನಡುಕ ಪ್ರಾರಂಭವಾಗಿದೆ.
ಬದಲಿ ನಿವೇಶನ ಹಂಚಿಕೆಯ ಪ್ರತಿಯೊಂದು ಕಡತಗಳು ಭೂಸ್ವಾಧೀನ ಶಾಖೆಯಿಯಿಂದ ಪ್ರಾರಂಭವಾಗಿ ಕಂದಾಯ ಶಾಖೆ, ತಾಂತ್ರಿಕ ಶಾಖೆ, ಆಯುಕ್ತರು ಮೂಲಕ ವಿಲೇವಾರಿಯಾಗಿರುತ್ತದೆ. ಹೀಗಾಗಿ ಕಡತ ವಿಲೇವಾರಿಯಲ್ಲಿ ನೇರವಾಗಿ ಭಾಗಿಯಾಗಿರುವ ಅಧಿಕಾರಿಗಳಿಗೆ ನಡುಕ ಪ್ರಾರಂಭವಾಗಿದೆ. ಆಯುಕ್ತರು ತಮ್ಮ ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಕಡತ ವಿಲೇ ವಾರಿ ಮಾಡಿಸಿಕೊಂಡಿದ್ದಾರೆ ಎಂಬ ಮಾತುಗಳು ಇದೀಗ ಮುಡಾ ಆವರಣದಲ್ಲಿ ಕೇಳಿ ಬರುತ್ತಿದೆ.
ಬದಲಿ ನಿವೇಶನದ ಕಡತಗಳು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಹೋಗಲು ವಿಳಂಬವಾದರೆ ಹಾಗೂ ಕೆಳ ಹಂತದ ಅಧಿಕಾರಿಗಳು ನಿರಾಕರಿಸಿದರೆ ಅವರನ್ನು ವರ್ಗಾವಣೆ ಮಾಡುವ ಬೆದರಿಕೆಯೊಡ್ಡುವ ಮೂಲಕ ಆಯುಕ್ತರು ಕಡತ ವಿಲೇವಾರಿ ಮಾಡಿಸಿ ದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ತನಿಖೆಯಿಂದ ಸತ್ಯಾಂಶ ಬಯಲಿಗೆ ಬರಬೇಕಾಗಿದೆ.
ಹಗರಣದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡದ ಪ್ರತಿಯೊಂದು ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದು, ಕಡತವನ್ನು ಯಾರು ವಿಲೇವಾರಿ ಮಾಡಿದ್ದಾರೆ ಎಂದು ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಮುಡಾದಲ್ಲಿರುವ ಬಹುಪಾಲು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಬದಲಿ ನಿವೇಶನ ಹಂಚಿಕೆ ಪ್ರಕರಣ ಹಲವಾರು ವರ್ಷಗಳಿಂದ ಸದ್ದಿಲ್ಲದೆ ನಡೆದಿದೆ. ಈ ಹಿಂದೆಯೂ ಮುಡಾದಲ್ಲಿ ಬದಲಿ ನಿವೇಶನದ ಹಗರಣ ಸದ್ದು ಮಾಡಿತ್ತು. ಹೀಗಾಗಿ 2022 ಅಥವಾ 2023ಕ್ಕೆ ಪ್ರಕರಣದ ತನಿಖೆ ಸೀಮಿತಗೊಳಿಸದೆ ಸಮಗ್ರವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.