ಮೂಡಾ ಹಗರಣ: 14 ಸೈಟ್ ಮಹಜರು ಇಂದು

muda scam
Published on

ವಿಜಯವಾಣಿ ಸುದ್ದಿಜಾಲ ಮೈಸೂರು

ಮುಡಾ ಹಗರಣದ ತನಿಖೆ ತೀವ್ರಗೊಳಿಸಿರುವ ಲೋಕಾಯುಕ್ತ ಪೊಲೀಸರು ಮಂಗಳವಾರ ತಡರಾತ್ರಿ ಮೈಸೂರು ತಾಲೂಕು ಕಚೇರಿಯ ಅಭಿಲೇಖನ ಶಾಖೆಗೆ ತೆರಳಿ ದಾಖಲೆ ಪರಿಶೀಲಿಸಿದ ಬೆನ್ನಲ್ಲೇ ಆರೋಪಿಗಳ ವಿಚಾರಣೆಗೂ ಸಿದ್ಧತೆ ಆರಂಭಿಸಿದ್ದಾರೆ. ಏತ ನ್ಮಧ್ಯೆ ವಿವಾದದ ಕೇಂದ್ರ ಬಿಂದುವಾಗಿರುವ, ಸದ್ಯ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿರುವ 14 ನಿವೇಶನಗಳ ಮಹಜರು ಗುರುವಾರ ನಡೆಯುವ ಸಾಧ್ಯತೆ ಇದೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಮಂಗಳವಾರ ತಡರಾತ್ರಿ ತಾಲೂಕು ಕಚೇರಿಗೆ ಭೇಟಿ ನೀಡಿ, ಪ್ರಕರಣದ ವಿವಾದದ ಮೂಲವಾಗಿರುವ ಕೆಸರೆ ಗ್ರಾಮದ ಸರ್ವೆ ನಂ.464 ಸಂಬಂಧ ಮಹತ್ವದ ದಾಖಲೆ ಪರಿಶೀಲಿಸಿದರು.

ಸದರಿ ಸರ್ವೆ ನಂಬರ್​ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೊಂದಿದ್ದ 3.16 ಎಕರೆ ಜಾಗದ ಮೂಲ ಮಾಲೀಕರು, ಯಾರಿಂದ ಯಾರಿಗೆ ಮಾರಾಟವಾಯಿತು? ಸಿದ್ದರಾಮಯ್ಯ ಅವರ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಭೂಮಿಯನ್ನು ಯಾವಾಗ ಖರೀದಿಸಿದರು? ಪಾರ್ವತಿ ಅವರಿಗೆ ಜಾಗ ಯಾವಾಗ ಹಸ್ತಾಂತರವಾಯಿತೆಂಬ ಮಾಹಿತಿ ಕಲೆಹಾಕಿದರು.

ವಿಚಾರಣೆಗೆ ಸಿದ್ಧತೆ: ಪ್ರಕರಣದ ಎ3 ಆಗಿರುವ ಮಲ್ಲಿಕಾರ್ಜುನಸ್ವಾಮಿ ಮನೆಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ಮಲ್ಲಿಕಾರ್ಜುನಸ್ವಾಮಿ ಮನೆ ಇದೆ. ಆದರೆ, ಮಲ್ಲಿಕಾರ್ಜುನಸ್ವಾಮಿ ನಾಲ್ಕು ವರ್ಷಗಳ ಹಿಂದೆಯೇ ಮನೆ ಬಾಡಿಗೆಗೆ ನೀಡಿ, ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಆದರೆ, ಅವರ ಮಾಹಿತಿ ಬಾಡಿಗೆದಾರರಿಗೂ ತಿಳಿದಿಲ್ಲ. ಹೀಗಾಗಿ ವಿಚಾರಣೆಗೆ ಕರೆತರಲು ಪ್ರಯತ್ನ ಆರಂಭವಾಗಿದೆ.

ಪರಭಾರೆ ವಿರುದ್ಧ ಕೋರ್ಟ್ ಮೊರೆ: ಮುಡಾ ಹಂಚಿಕೆ ಮಾಡಿರುವ ವಿವಾದಿತ ನಿವೇಶನಗಳನ್ನು ತನಿಖೆ ಪೂರ್ಣಗೊಂಡು ತೀರ್ಪು ಹೊರಬರುವವರೆಗೂ ಪರಭಾರೆ ಮಾಡಬಾರದೆಂದು ಕೋರಿ ವಕೀಲ ಎಸ್. ಅರುಣ್​ಕುಮಾರ್ ಮಂಗಳವಾರ ಪ್ರಧಾನ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಾದ ಡಿ.ಡಿ. ನಟೇಶ್ ಹಾಗೂ ಜಿ.ಟಿ. ದಿನೇಶ್​ಕುಮಾರ್ ಅವಧಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ಪರಭಾರೆ ಮಾಡದಂತೆ ಮುಡಾಗೆ ನಿರ್ದೇಶನ ನೀಡಬೇಕು ಎಂದು ಅರುಣ್​ಕುಮಾರ್ ಕೋರಿದ್ದಾರೆ.

ಭದ್ರತೆ ನಿರಾಕರಿಸಿದ ಕೃಷ್ಣ

ನನಗೆ ಯಾವುದೇ ಭದ್ರತೆ ಬೇಡ. ಭದ್ರತೆ ನೀಡಿ ಬೇಹುಗಾರಿಕೆ ಮಾಡಿಸುತ್ತಾರೆ. ಮೈಸೂರು ನಗರ ಪೊಲೀಸ್ ಆಯುಕ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದ ಬಂದಿದ್ದಾರೆ. ನನ್ನ ಪ್ರತಿಯೊಂದು ಫೋನ್ ಕರೆಯ ಮಾಹಿತಿಯನ್ನು ಮುಖ್ಯಮಂತ್ರಿಗೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ನಿವೇಶನ ಮಹಜರಿಗೆ ಸಿದ್ಧತೆ

ಬುಧವಾರ ನಡೆಯಬೇಕಿದ್ದ ವಿಜಯನಗರದ ವಿವಿಧ ಹಂತದಲ್ಲಿನ 14 ಸೈಟ್​ಗಳ ಮಹಜರು ಪ್ರಕ್ರಿಯೆ ಗುರುವಾರ ಅಥವಾ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ದೂರುದಾರ ಸ್ನೇಹಮಯಿ ಕೃಷ್ಣ ಗುರುವಾರ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಹಾಜರಾದರೆ ಮಹಜರು ಶುಕ್ರವಾರ ನಡೆಯಲಿದೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಈಗಾಗಲೇ ಕೆಸರೆ ಗ್ರಾಮಕ್ಕೆ ಭೇಟಿ ನೀಡಿ ನಂ.464 ರಲ್ಲಿನ 3.16 ಎಕರೆ ಜಾಗದ ಮಹಜರು ಕಾರ್ಯ ಪೂರ್ಣಗೊಳಿಸಿದ್ದಾರೆ.

ಇಂದು ಇಡಿ ಕಚೇರಿಗೆ ಸ್ನೇಹಮಯಿ

ಬೆಂಗಳೂರು: ಸಮನ್ಸ್ ಜಾರಿ ಆಗಿರುವ ಹಿನ್ನೆಲೆಯಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಗುರುವಾರ ಇ.ಡಿ.ವಿಚಾರಣೆಗೆ ಹಾಜರಾಗಲಿದ್ದಾರೆ. ಶಾಂತಿನಗರದ ಇ.ಡಿ.ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಸಲ್ಲಿಸಿರುವ ದೂರಿನ ಸಂಬಂಧ ಸ್ನೇಹಮಯಿ ಕೃಷ್ಣ ಬಳಿ ಹೆಚ್ಚಿನ ದಾಖಲೆ ಪತ್ರ ವಶಕ್ಕೆ ಪಡೆದು ಹೇಳಿಕೆ ದಾಖಲುಮಾಡಿಕೊಳ್ಳಲಿದ್ದಾರೆ. ಇದರ ಮೇರೆಗೆ ತನಿಖೆ ದಿಕ್ಕು ಸ್ಪಷ್ಟವಾಗಲಿದೆ ಎನ್ನಲಾಗುತ್ತಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿರುವ ಎಫ್​ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು ಸಹ ಬೇನಾಮಿ ಆಸ್ತಿ ವರ್ಗಾವಣೆ ನಿಷೇಧ ಕಾಯ್ದೆ-1988 ಮತ್ತು ಕರ್ನಾಟಕ ಭೂಮಿ ವಶ (ಗ್ರಾ್ಯಬಿಂಗ್) ಕಾಯ್ದೆ-2011ರ ಸೆಕ್ಷನ್​ನಲ್ಲಿ ಇಸಿಐಆರ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ದಾಖಲೆ ಪರಿಶೀಲನೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಮುಡಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಯಾವ ಯಾವ ಲೋಪ ಎಸಗಿದ್ದಾರೆ. ಇದರಲ್ಲಿ ಸಿಎಂ ಪಾತ್ರ ಏನಿದೆ ಎಂಬುದರ ಬಗ್ಗೆ ಸೂಕ್ಷ್ಮವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಇಡಿ ಮೂಲಗಳು ಮಾಹಿತಿ ತಿಳಿಸಿವೆ.

ಸ್ನೇಹಮಯಿ ಕೃಷ್ಣನ ಹೇಳಿಕೆ ದಾಖಲಿಸಿಕೊಂಡ ಮೇಲೆ ಇಡಿ ಅಧಿಕಾರಿಗಳು ಮುಡಾದಲ್ಲಿ ಅಂದು ಕರ್ತವ್ಯ ನಿರ್ವಹಿಸಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಬಹುದು. ಅವರಿಂದ ಸಹ ಹೇಳಿಕೆ ಪಡೆದು ಅವರ ಪಾತ್ರ ಮತ್ತು ಸಿಎಂ ತಮ್ಮ ಪತ್ನಿ ಪಾವರ್ತಿಗೆ ಸೈಟ್ ಮಂಜೂರು ಮಾಡಲು ಪ್ರಭಾವ ಬೀರಿದ್ದರ ಎಂಬುದರ ಬಗ್ಗೆ ಪ್ರಶ್ನಿಸುವ ಸಾಧ್ಯತೆಗಳಿವೆ. ಅಧಿಕಾರಿಗಳ ಹೇಳಿಕೆಯಲ್ಲಿ ಆರೋಪ ಕೇಳಿಬಂದರೇ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

ಕ್ರಯ ಪತ್ರ ರದ್ದು ಇಂದು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ವತಿಯಿಂದ ಪಡೆದಿರುವ 14 ನಿವೇಶನಗಳ ಕ್ರಯ ಪತ್ರವನ್ನು ರದ್ದು ಪ್ರಕ್ರಿಯೆಯನ್ನು ಮುಡಾ ಗುರುವಾರ ಪೂರ್ಣಗೊಳಿಸಲಿದೆ. ಪಾರ್ವತಿ ನಿವಾಸಕ್ಕೆ ಮಂಗಳವಾರವೇ ತೆರಳಿ ಸಹಿ ಪಡೆದುಕೊಂಡಿದ್ದು, ಆ ದಾಖಲೆಗಳನ್ನು ಗುರುವಾರ ಕಚೇರಿಗೆ ಸಲ್ಲಿಸಲಾಗುವುದು. ದಾಖಲೆಗೆ ಸಂಬಂಧಿಸಿದ ಸಂಖ್ಯೆಯ ಆಧಾರದಲ್ಲಿ ನಿವೇಶನಗಳ ಖಾತೆ ರದ್ದು ಪ್ರಕ್ರಿಯೆ ಪೂರ್ಣ ಮಾಡಲಾಗುತ್ತದೆ ಎಂದು ಮುಡಾ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಇ.ಡಿ.ವಿಚಾರಣೆಗೆ ಹಾಜರಾಗುತ್ತೇನೆ. ಮುಡಾದಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆದಿದೆ. ಸಿದ್ದರಾಮಯ್ಯ ಅವರದ್ದೂ ಸೇರಿ 500 ಪುಟಗಳ ಎಲ್ಲ ದಾಖಲೆಗಳನ್ನು ನೀಡುತ್ತೇನೆ. | ಸ್ನೇಹಮಯಿ ಕೃಷ್ಣ ದೂರುದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net