

ಬೆಂಗಳೂರು: ಮುಡಾ(MUDA) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ ಎಂಬ ವರದಿಗಳ ಬೆನ್ನಲ್ಲೆ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಮೇಲೆ ಇದೀಗ ಮುಗಿಬಿದ್ದಿದ್ದಾರೆ.
ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ನಂತರ ಮಾನ್ಯ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಎರಡನೇ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ ವ್ಯಂಗ್ಯವಾಡಿದ್ದಾರೆ.
ಮೂಡಾ ಹಗರಣದಲ್ಲಿ ಲೋಕಾಯುಕ್ತ ನಡೆಸಿರುವ ತನಿಖೆ ಕಾಟಾಚಾರದ ತನಿಖೆಯಾಗಿದ್ದು, ಲೋಕಾಯುಕ್ತ ಸಲ್ಲಿಸಿರುವ ವರದಿ ಕೇವಲ ಸಿದ್ದರಾಮಯ್ಯ ಬಚಾವೋ ವರದಿ ಅಷ್ಟೇ ಎಂದು ಆಶೋಕ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಾಯುಕ್ತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ ಚಿಟ್ ಪಡೆದಿರುವುದು ಒಂದು ವೇಳೆ ನಿಜವೇ ಆಗಿದ್ದರೆ ಲೋಕಾಯುಕ್ತ ತನಿಖೆಯ ಬಗ್ಗೆ ನಾವು ಎತ್ತಿದ್ದ ಆಕ್ಷೇಪ ಹಾಗೂ ಅನುಮಾನಗಳು ಸರಿ ಎಂದು ಸಾಬೀತಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪಾರದರ್ಶಕ ತನಿಖೆಯ ದೃಷ್ಟಿಯಿಂದ ನಾವು ಮೊದಲಿನಿಂದಲೂ ಮುಡಾ ಹಗರಣದ ಕುರಿತಂತೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ, ಈ ಸಂಬಂಧ ಇಷ್ಟರಲ್ಲೇ ಹೊರಬೀಳಲಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದಿರುವ ವಿಜಯೇಂದ್ರ, ತಮ್ಮ ಮೇಲೆ ಸಾಕ್ಷಿಸಮೇತ ಗುರುತರ ಆರೋಪ ಬಂದರೂ ತಾವೇ ನಿಯೋಜಿಸಿರುವ ಅಧಿಕಾರಿಗಳಿರುವ ಲೋಕಾಯುಕ್ತದ ಮೂಲಕ ತನಿಖೆ ಎದುರಿಸಿ ಲೋಕಾಯುಕ್ತ ಸಂಸ್ಥೆಗೆ ತಮ್ಮ ಪ್ರಭಾವ ಬಳಸಿದ ಮೊದಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಬರೆದಿದ್ದಾರೆ ಎಂದು ಟೀಕಿಸಿದ್ದಾರೆ.