ಕನ್ನಡಿಗರಿಗೆ ಎಂಟಿಎಸ್ ಅನ್ಯಾಯ; ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹುದ್ದೆಗೂ ಇಂಗ್ಲಿಷ್-ಹಿಂದಿಯಲ್ಲೇ ಪರೀಕ್ಷೆ ನಿಗದಿ

Front
Published on

| ರಮೇಶ್ ಮೈಸೂರು ಬೆಂಗಳೂರು

ಎಸ್​ಎಸ್​ಎಲ್​ಸಿ ವಿದ್ಯಾರ್ಹತೆಯ 7,600ಕ್ಕೂ ಅಧಿಕ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳು ಹಾಗೂ ಹವಾಲ್ದಾರ್ ಶ್ರೇಣಿಯ 3,603 ಸೇರಿ 11 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತ್ರ ಪರೀಕ್ಷೆ ಬರೆಸಲು ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (ಸ್ಟಾಫ್ ಸೆಲೆಕ್ಷನ್ ಕಮಿಷನ್- ಎಸ್​ಎಸ್​ಸಿ) ಮುಂದಾಗಿದೆ. ಇದರಿಂದ ಕನ್ನಡಿಗರು ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದವರು ಉದ್ಯೋಗದಿಂದ ವಂಚಿತರಾಗುವ ಅಪಾಯಕ್ಕೆ ಸಿಲುಕಿದ್ದಾರೆ. ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇರಲಿವೆ. ಮೊದಲ ಪತ್ರಿಕೆಯಲ್ಲಿ 25 ಅಂಕಗಳಿಗೆ 25 ಪ್ರಶ್ನೆಗಳಿರುವ ಜನರಲ್ ಇಂಗ್ಲಿಷ್, 25 ಅಂಕಗಳಿಗೆ ಜನರಲ್ ಇಂಟಲಿಜೆನ್ಸ್ ಆಂಡ್ ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್ ಹಾಗೂ ನಾಲ್ಕನೇ ವಿಷಯವಾಗಿ ಜನರಲ್ ಅವೇರ್​ನೆಸ್​ನ 25 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 100 ಅಂಕದ ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕಾಗುತ್ತದೆ. ಆದರೆ, ಈ ಪ್ರಶ್ನೆಪತ್ರಿಕೆ ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತ್ರ ಇರಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿನ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತದೆ. ಇವುಗಳಿಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಹೊರರಾಜ್ಯದವರೂ ಕೂಡ ಬೆಂಗಳೂರಿಗೆ ಮೊದಲ ಆದ್ಯತೆ ನೀಡಬಹುದು. ಅರ್ಜಿ ಸಲ್ಲಿಸುವ ಕನ್ನಡಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ಹೊರರಾಜ್ಯದವರು ಸುಲಭವಾಗಿ ಇಲ್ಲಿನ ಕೆಲಸಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕನ್ನಡಿಗರ ಸಂಖ್ಯೆ ಶೇ.1ಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.

ಪಠ್ಯಕ್ರಮವೇ ಬದಲು: ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್​ಇ) ಪಠ್ಯಕ್ರಮವನ್ನೇ ಅನುಸರಿಸಲಾಗುತ್ತದೆ. ಕನ್ನಡ ಮಾಧ್ಯಮದಲ್ಲಿ, ರಾಜ್ಯ ಪಠ್ಯಕ್ರಮವನ್ನು ಓದಿದವರಿಗೆ ಇದು ಕಬ್ಬಿಣದ ಕಡಲೆಯಾಗಿರುತ್ತದೆ. ಹೆಚ್ಚಿನ ವಿದ್ಯಾರ್ಹತೆಯ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದರೂ ಹಿಂದಿ ಮಾಧ್ಯಮದಲ್ಲಿ ಓದಿದವರಿಗೆ ದೊರೆಯುವ ಲಾಭ ನಮ್ಮವರಿಗೆ ಇಲ್ಲವಾಗುತ್ತದೆ.

ರಾಜ್ಯಗಳಿಗೆ ಹುದ್ದೆ ನೀಡಲಿ: ಕನ್ನಡದಲ್ಲಿ ಪರೀಕ್ಷೆ ನಡೆಸಿದರೂ, ಪ್ರಶ್ನೆಪತ್ರಿಕೆಯಲ್ಲಿ ತಪು್ಪಗಳ ಸರಮಾಲೆಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಇಂಗ್ಲಿಷ್ ಅವತರಣಿಕೆಯನ್ನೇ ಅಂತಿಮವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಗೊಂದಲಕ್ಕೊಳಗಾಗುವ ಅಭ್ಯರ್ಥಿಗಳು ತಪು್ಪ ಉತ್ತರಗಳನ್ನು ಬರೆಯುವ ಸಾಧ್ಯತೆ ಹೆಚ್ಚು. ಹುದ್ದೆಗಳನ್ನು ಆಯಾ ರಾಜ್ಯಗಳಿಗೆ ಮೀಸಲಿಡುವುದು ಹೆಚ್ಚು ಸರಿಯಾದ ಕ್ರಮ ಎನ್ನುವುದು ಧಾರವಾಡ ಬುಲಬುಲೆ ಕರಿಯರ್ ಅಕಾಡೆಮಿಯ ಡಾ. ಗುರುರಾಜ ಬುಲಬುಲೆ ಅಭಿಪ್ರಾಯ. ಕೆಳಹಂತದ ಸ್ತರದ ಉದ್ಯೋಗ, ಹುದ್ದೆಗಳನ್ನು ಆಯಾ ರಾಜ್ಯಕ್ಕೆ ಮೀಸಲಾಗಿಡಬೇಕು ಎಂದು ಒತ್ತಾಯಿಸುತ್ತಾರೆ.

ವರ್ಗಾವಣೆ ವಿರಳ: ಎಂಟಿಎಸ್ ಹುದ್ದೆಗಳನ್ನು ಆಯಾ ರಾಜ್ಯಗಳಿಗಾಗಿಯೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಗ್ರೂಪ್ ಡಿ ವೃಂದದ ಹುದ್ದೆಗಳಿಗೆ ಆಯ್ಕೆಯಾದವರನ್ನು ಆಫೀಸ್ ಅಟೆಂಡೆಂಟ್, ಇನ್​ವರ್ಡ್-ಔಟ್​ವರ್ಡ್ ವಿಭಾಗ, ಅಂಚೆ ಇಲಾಖೆಯಲ್ಲಾದರೆ ಸಾರ್ಟಿಂಗ್ ಮೊದಲಾದ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಈ ಹುದ್ದೆಗಳ ವರ್ಗಾವಣೆ ವಿರಳವಾಗಿರುತ್ತದೆ. ಹೀಗಾಗಿ ಆಯಾ ರಾಜ್ಯದವರಿಗೆ ಹುದ್ದೆಗಳನ್ನು ಮೀಸಲಿಡಲು ಯಾವುದೇ ತೊಂದರೆ ಎದುರಾಗದು ಎನ್ನುವುದು ತಜ್ಞರ ಅಭಿಮತ.

ಪರೀಕ್ಷಾ ಕೇಂದ್ರಗಳು: ರಾಜ್ಯದ ಪ್ರಮುಖ ನಗರಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ಈ ಪರೀಕ್ಷಾ ಕೇಂದ್ರಗಳಿವೆ. ಬೆಂಗಳೂರಿನ ಕೋರಮಂಗಲದಲ್ಲಿ ಎಸ್​ಎಸ್​ಸಿಯ ಪ್ರಾದೇಶಿಕ ಕೇಂದ್ರವಿದೆ.

ಜುಲೈನಲ್ಲಿ ಪರೀಕ್ಷೆ?

  • ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಏಪ್ರಿಲ್ 30
  • ಆನ್​ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಮೇ 2
  • ಅರ್ಜಿ ತಿದ್ದುಪಡಿಗೆ ಅವಕಾಶ: ಮೇ 5-9
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಸಂಭಾವ್ಯ ಅವಧಿ: ಜುಲೈ 2022

ಕೆಳಹಂತದ ಹುದ್ದೆಗಳ ಪರೀಕ್ಷೆಯನ್ನು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು. ಈ ನೇಮಕ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಕನ್ನಡಿಗರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು. ಅಧಿಸೂಚನೆಯನ್ನು ತಿದ್ದುಪಡಿ ಮಾಡಿ ಹೊರಡಿಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. | ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ವಿಜಯವಾಣಿ ಅಭಿಯಾನ

ರಾಜ್ಯ ಕಾರ್ವಿುಕ ವಿಮಾ ನಿಗಮದ ಎಂಟಿಎಸ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್​ನಲ್ಲಿ ಮಾತ್ರ ನಡೆಸಲು ಕಳೆದ ಡಿಸೆಂಬರ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಕನ್ನಡದಲ್ಲೂ ಪರೀಕ್ಷೆಗೆ ಒತ್ತಾಯಿಸಿ ವಿಜಯವಾಣಿ ಡಿ.30ರಂದು ‘ಅಟೆಂಡರ್ ಕೆಲಸಕ್ಕೂ ಇಂಗ್ಲಿಷ್, ಹಿಂದಿಯಲ್ಲೇ ಪರೀಕ್ಷೆ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯ ಹಾಗೂ ಕೇಂದ್ರದ ಸಚಿವರು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಜ.11ರಂದು ಇಎಸ್​ಐಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು.

ಕಣ್ಣೊರೆಸುವ ತಂತ್ರ..?: ಎರಡನೇ ಪತ್ರಿಕೆಯಲ್ಲಿ 50 ಅಂಕಗಳಿಗೆ ಕಿರುಪ್ರಬಂಧ ಹಾಗೂ ಇಂಗ್ಲಿಷ್​ನಲ್ಲಿ ಪತ್ರ ಬರೆಯುವ ಪರೀಕ್ಷೆ ಇರಲಿದೆ. ಇದಕ್ಕೆ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು. ಅಂದರೆ, ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಕಿರುಪ್ರಬಂಧವನ್ನಷ್ಟೇ ಕನ್ನಡದಲ್ಲಿ ಬರೆಯಬಹುದು. ವಿಪರ್ಯಾಸವೆಂದರೆ ಇದು ಅರ್ಹತಾದಾಯಕ ಪತ್ರಿಕೆಯಾಗಿದೆ. ಮೆರಿಟ್ ಪಟ್ಟಿ ಪ್ರಕಟಿಸಲು ಇಲ್ಲಿ ಪಡೆದ ಅಂಕಗಳನ್ನು ಪರಿಗಣಿಸುವುದೇ ಇಲ್ಲ ಎಂದು ಎಸ್​ಎಸ್​ಸಿ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net