

ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಯ ಕಿರಿಕಿರಿ ನಡುವೆಯೂ ಸಚಿವ ಸ್ಥಾನ ಕೇಳಿಕೊಂಡು ಸಿಎಂ ಯಡಿಯೂರಪ್ಪ ಬಳಿ ಸೋಮವಾರ ಎಂಟಿಬಿ ನಾಗರಾಜ್ ಬಂದಿದ್ದರು.
ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ಕಂಗಾಲಾಗಿರುವ ಎಂಟಿಬಿ ನಾಗರಾಜ್ ಈಗಾಗಲೇ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ದಿನ ನಿತ್ಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಹೋಗುತ್ತಿರುವ ಎಂಟಿಬಿ, ಸೋಮವಾರವೂ ಆಗಮಿಸಿದ್ದರು.
ಆರ್. ಅಶೋಕ್ ಅವರೇ ನನ್ನನ್ನು ಕರೆದುಕೊಂಡು ಬಂದಿದ್ದು. ಇಲ್ಲಿಗೆ ಬಂದು ಒಂದೂವರೆ ವರ್ಷ ಆಯ್ತು, ಇನ್ನು ನನ್ನ ಬೇಡಿಕೆ ಈಡೇರಿಲ್ಲ. ಸಾರಿಗೆ ನೌಕರರ 9 ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ. ಆದರೆ ನನ್ನ ಒಂದೇ ಒಂದು ಬೇಡಿಕೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಎಂಟಿಬಿ ನಾಗರಾಜ್ ಬೇಸರದಿಂದ ನುಡಿದಿದ್ದಾರೆ.
ಸಂಕ್ರಾಂತಿವರೆಗೂ ಸಚಿವ ಸ್ಥಾನದ ಬಗ್ಗೆ ಮಾತನಾಡಲೇ ಬೇಡ ಎಂದು ಎಂಟಿಬಿ ನಾಗರಾಜ್ಗೆ ಸಿಎಂ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಎಂಟಿಬಿ ನಾಗರಾಜ್ ರಾಜೀನಾಮೆ ಮಾತು ಪ್ರಸ್ತಾಪಿಸಿದ್ದರು. ಇವರ ಮಾತಿಗೆ ಕಕ್ಕಾಬಿಕ್ಕಿಯಾದ ಸಿಎಂ, ‘ಕೈ ಮುಗಿಯುತ್ತೇನೆ ಸುಮ್ಮನಿರಿ. ರಾಜೀನಾಮೆ ನೀಡುವ ಮಾತನಾಡಬೇಡಿ. ಹೈಕಮಾಂಡ್ ಒಪ್ಪಿಗೆ ನೀಡಿದ ತಕ್ಷಣವೇ ಸಚಿವರನ್ನಾಗಿ ಮಾಡುತ್ತೇವೆ’ ಎಂದು ಮನವಿ ಮಾಡಿದ್ದರು.