

ಬೆಂಗಳೂರು: ಮಹಾಮಾರಿ ಕರೊನಾ ಅಬಕಾರಿ ಇಲಾಖೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮದ್ಯದಂಗಡಿಗಳಿಗೆ (ಸಿಎಲ್11ಸಿ) ಅಂದಾಜು 40 ಕೋಟಿ ರೂ. ನಷ್ಟ ಸಂಭವಿಸಿದೆ.
ರಾಜ್ಯದಾದ್ಯಂತ ಒಟ್ಟು 705 ಎಂಎಸ್ಐಎಲ್ ಮದ್ಯದಂಗಡಿ ಇವೆ. ಈ ಪೈಕಿ ಬೆಂಗಳೂರು ವಿಭಾಗದಲ್ಲಿ 146, ಬೆಳಗಾವಿ ವಿಭಾಗ 162, ಕಲಬುರಗಿ 93, ಹೊಸಪೇಟೆ ವಿಭಾಗ 109, ಮಂಗಳೂರು 86, ಮೈಸೂರು ವಿಭಾಗದಲ್ಲಿ 109 ಎಂಎಸ್ಐಎಲ್ ಮದ್ಯದಂಗಡಿಗಳಿವೆ. ಇವುಗಳಿಂದ ಪ್ರತಿ ವರ್ಷ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಆದರೆ, ಈ ವರ್ಷದ ಆದಾಯಕ್ಕೆ ಕೋವಿಡ್ ಸೋಂಕು ಬಾರಿ ಹೊಡೆತ ನೀಡಿದೆ.
ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡಿದ್ದರ ಪರಿಣಾಮ ಎಂಎಸ್ಐಎಲ್ ಮದ್ಯದಂಗಡಿಗಳಿಗೆ 40 ಕೋಟಿ ರೂ. ನಷ್ಟ ಉಂಟಾಗಿದೆ.
2009ರಲ್ಲಿ 463 ಹಾಗೂ 2016ರಲ್ಲಿ 900 ಸೇರಿ ಒಟ್ಟು 1,363 ಎಂಎಸ್ಐಎಲ್ ಮದ್ಯದಂಗಡಿಗಳಿಗೆ ಮಂಜೂರಾತಿ ಸಿಕ್ಕಿದೆ. ಇದರಲ್ಲಿ ಈವರೆಗೆ 705 ಮದ್ಯದಂಗಡಿಗಳನ್ನು ತೆರೆದಿದ್ದು, ಉಳಿದ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆಗಳು ನಡೆಯುತ್ತಿವೆ.