

ಆಂಧ್ರಪ್ರದೇಶ: 'ಹಾಯ್ ನಾನ್ನ' ಚಿತ್ರದ ಯಶಸ್ಸಿನ ಬಳಿಕ ಸೌತ್ ಬ್ಯೂಟಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದು ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ 'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ. ಈ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದೇ ಆದರೂ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಗೆಲುವಿನ ಓಟ ಮುಂದುವರಿಸಲು ಸಾಧ್ಯವಾಗದೆ, ಹೀನಾಯ ಸೋಲನ್ನು ಕಂಡಿತು. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸದೆ ಮುಗ್ಗರಿಸಿದ ಈ ಸಿನಿಮಾದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಮೃಣಾಲ್, ಇದೀಗ ಬಾಲಿವುಡ್ನ ಹೊಸ ಪ್ರಾಜೆಕ್ಟ್ನಲ್ಲಿ ನಟಿಸಲು ಎದುರುನೋಡುತ್ತಿದ್ದಾರೆ.
ಹಿಂದಿಯಲ್ಲಿ ಹೊಸ ಚಿತ್ರಕ್ಕೆ ಸಹಿ ಹಾಕಿರುವ ಮೃಣಾಲ್, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಪ್ರೇಮಕಥೆ ಆಧರಿತ ಸಿನಿಮಾದಲ್ಲಿ ಬಾಲಿವುಡ್ ನಟ ಸಿದ್ದಾಂತ್ ಚತುರ್ವೇದಿ ಜತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಮೃಣಾಲ್ ಅವರ ಪಾತ್ರ ನೋಡುಗರಿಗೆ ಬಹಳ ಸುಲಭವಾಗಿ ಕನೆಕ್ಟ್ ಆಗುತ್ತದೆ ಎಂದೇ ಹೇಳಲಾಗಿದೆ.
ಇತ್ತೀಚಿನ ವರದಿ ಪ್ರಕಾರ, ಸಿನಿಮಾದ ಟೈಟಲ್ ಅನ್ನು 'ತುಮ್ ಹಿ ಹೋ' ಎಂದು ಇಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ರವಿ ಉದ್ಯಾವರ್ ನಿರ್ದೇಶನದ ಈ ಚಿತ್ರವು 2023ರ ಮೇ ತಿಂಗಳಿನಿಂದ ನಿರ್ಮಾಣ ಹಂತದಲ್ಲಿತ್ತು. ಉತ್ತರಾಖಂಡದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಯಾವ ದಿನದಂದು ಸಿನಿಮಾ ತೆರೆಗೆ ಬರಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).