

ನವದೆಹಲಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಮ್ಮ ಮುಂದೆ ಸಾಕಷ್ಟು ಸವಾಲುಗಳಿದ್ದು, ಸಂಸದರು ಸರ್ಕಾರಕ್ಕೆ ಸಹಕಾರ ನೀಡುವ ಜತೆಗೆ ಅಭಿವೃದ್ಧಿ ಕೆಲಸಗಳಿಗೆ ಸಾಥ್ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ. ದೆಹಲಿಯ ಅಶೋಕ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಉಭಯ ಸದನಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಸ್ತಾಪಿಸಬೇಕು. ಆ ಮೂಲಕ ಸರ್ಕಾರದ ಕೈ ಬಲಪಡಿಸಬೇಕು. ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ಯೋಜನೆಗಳಿಗೆ ಅನುಮತಿ ಪಡೆಯುವ ನಿಟ್ಟಿನಲ್ಲಿಯೂ ನಿಮ್ಮ ನೆರವು ಬೇಕು ಎಂದು ವಿನಂತಿಸಿಕೊಂಡರು.
ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದರಾದ ಪ್ರತಾಪ ಸಿಂಹ, ಶ್ರೀನಿವಾಸ ಪ್ರಸಾದ್, ಜೆಡಿಎಸ್ನ ಎಚ್.ಡಿ. ದೇವೇಗೌಡ, ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಸುರೇಶ್, ಜಿ.ಸಿ. ಚಂದ್ರಶೇಖರ್, ನಾಸಿರ್ ಹುಸೇನ್ ಸಭೆಗೆ ಗೈರಾಗಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ, ಭಗವಂತ ಖೂಬಾ ಹಾಗೂ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಸಭೆಯಲ್ಲಿ ಹಾಜರಿದ್ದು, ಮಾತನಾಡಿದರು.
ಕರ್ನಾಟಕ ಭವನ ಸುಧಾರಣೆಗೆ ಕ್ರಮ: ದೆಹಲಿ ಕರ್ನಾಟಕ ಭವನದಲ್ಲಿರುವ ನಿವಾಸಿ ಆಯುಕ್ತರ ಕಚೇರಿ, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸಮರ್ಥ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಇದು ಹಿಂದೆ ನನ್ನ ಗಮನಕ್ಕೂ ಬಂದಿತ್ತು. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆ ಎಂದು ಬೊಮ್ಮಾಯಿ ರಾಜ್ಯದ ಸಂಸದರಿಗೆ ಭರವಸೆ ನೀಡಿದ್ದಾರೆ.
ಗೃಹ ಸಚಿವರ ಭೇಟಿ: ಸಂಸತ್ತಿನ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ಸಿಎಂ ಬೊಮ್ಮಾಯಿ ಅವರಿಗೆ ಉತ್ತಮ ಆಡಳಿತ ನೀಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅಭಯ ನೀಡಿದ್ದಾರೆ. ಷಾ ಜತೆಗೆ ಸಿಎಂ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಷಾ ಎಚ್ಚರಿಕೆ: ಸರ್ಕಾರದ ಮುಖ್ಯಸ್ಥರಾಗಿಯೂ ಮತ್ತು ರಾಜಕೀಯವಾಗಿಯೂ ಇದು ನಿಮಗೆ ಟೆಸ್ಟಿಂಗ್ ಟೈಮ್ ಎಂದು ಬೊಮ್ಮಾಯಿಗೆ ಷಾ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷ ಬಲಪಡಿಸುವ, ಉತ್ತಮ ಆಡಳಿತ ನೀಡುವ, ಪಕ್ಷದ ಇಮೇಜ್ ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಮುಂದೆ ದೊಡ್ಡ ಸವಾಲಿದೆ ಎಂದೇ ಷಾ ಪರೋಕ್ಷವಾಗಿ ಈ ಸಂದೇಶ ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿಎಂ ಕೂಡ, ನನಗಿದು ಟೆಸ್ಟಿಂಗ್ ಟೈಮ್ ಎಂಬುದಾಗಿ ಒಪ್ಪಿಕೊಂಡಿದ್ದಾರೆ.
ಬಿಜೆಪಿಯ ಬೆಳವಣಿಗೆ ಮತ್ತು ಸರ್ಕಾರದ ಆಗು-ಹೋಗುಗಳನ್ನು ರಾಜ್ಯ ಕಾಂಗ್ರೆಸ್ ತೀವ್ರತರನಾಗಿ ಕುಟುಕಿದೆ. 2019ರಲ್ಲಿ ನೆರೆ ಬಂದಾಗ - ಸಂಪುಟವಿಲ್ಲದ ಸರ್ಕಾರ, 2020ರ ನೆರೆ- ಕುರ್ಚಿ ಕದನ, 2021ರ ನೆರೆ ಬಂದಿದೆ- ಏಕವ್ಯಕ್ತಿ ಸರ್ಕಾರದ ಖಾತೆ ಕಸರತ್ತು, ಕರೋನಾ 1ನೇ ಅಲೆ- ಭ್ರಷ್ಟಾಚಾರಕ್ಕೆ ಪೈಪೋಟಿ, ಆಂತರಿಕ ಕಚ್ಚಾಟ, 2ನೇ ಅಲೆ- ಸಿಡಿ ತಡೆಯಾಜ್ಞೆ, 3ನೇ ಅಲೆ- ಕುರ್ಚಿಗಾಗಿ ದೆಹಲಿ ಪರೇಡ್ ದುರಾಡಳಿತದ ವೈಖರಿ ಎಂದು ವ್ಯಾಖ್ಯಾನಿಸಿದೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಅಧಿಕೃತ ನಿವಾಸಕ್ಕೆ ಕರೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದಲ್ಲದೆ, ಆಡಳಿತ ನಿರ್ವಹಣೆ ಕುರಿತ ತಮ್ಮ ವೈಯಕ್ತಿಕ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಮೋದಿ ಅವರು ತಮ್ಮೊಂದಿಗೆ ಮುಕ್ಕಾಲು ಗಂಟೆ ಮಾತನಾಡುತ್ತಾರೆಂದು ಬೊಮ್ಮಾಯಿ ನಿರೀಕ್ಷೆ ಮಾಡಿರಲಿಲ್ಲ. ಆದರೆ ಮೋದಿಯವರ ನಡವಳಿಕೆ, ಮಾತಿನ ಶೈಲಿ ಸಿಎಂ ಉತ್ಸಾಹ, ಹುಮ್ಮಸ್ಸು ದುಪ್ಪಟ್ಟುಗೊಳಿಸಿದೆ. ತಾವು ಸಿಎಂ ಆಗಿದ್ದಾಗ ಹಾಗೂ ಈಗ ಪ್ರಧಾನಿಯಾಗಿ ತನ್ಮ ಅನುಭವಗಳನ್ನು ಹಂಚಿಕೊಂಡ ಮೋದಿ, ಬೊಮ್ಮಾಯಿಯವರಿಗೆ ಆಡಳಿತ ನಿರ್ವಹಣೆ ಕುರಿತ ಕೆಲ ಟಿಪ್ಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು ಮತ್ತು ಭೇಟಿಗೆ ಬರಬಹುದು. ದೆಹಲಿಗೆ ಬರಲು ಸಾಧ್ಯವಾಗದಿದ್ದಲ್ಲಿ ದೂರವಾಣಿ ಮೂಲಕ ಮಾತನಾಡಿ, ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿ ನಿಮ್ಮ ಸರ್ಕಾರಕ್ಕೆ ನಮ್ಮಿಂದ ಪೂರ್ಣ ಸಹಕಾರ ಸಿಗಲಿದೆ ಎಂದು ಮೋದಿ ಭರವಸೆ ಕೊಟ್ಟಿದ್ದಾರೆ. ರಾಜ್ಯದ ಎದುರಿಸುತ್ತಿರುವ ನೆರೆ ಹಾವಳಿ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮುಂದಿನ ಬಾರಿ ವಿಸõತ ಪ್ರಸ್ತಾವನೆ ನೀಡುತ್ತೇನೆ ಎಂದ ಬೊಮ್ಮಾಯಿ, ರಾಜ್ಯದ ಕರೊನಾ ಪರಿಸ್ಥಿತಿ ಮತ್ತು ನೆರೆ ರಾಜ್ಯ ಕೇರಳದಲ್ಲಿ ಕರೊನಾ ಹೆಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೇರಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಿಎಂಗೆ ಸಲಹೆ ನೀಡಿರುವ ಪಿಎಂ, ಗಡಿ ಭಾಗದಲ್ಲಿ ಕರೊನಾ ಟೆಸ್ಟಿಂಗ್ ಹೆಚ್ಚಿಸುವಂತೆಯೂ ನಿರ್ದೇಶನ ನೀಡಿದ್ದಾರೆ. ‘ಪ್ರಧಾನಿ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ಔದಾರ್ಯಕ್ಕೆ ಧನ್ಯ. ಅವರ ಸಲಹೆಯಂತೆ ಆಡಳಿತ ನೀಡುತ್ತೇನೆ’ ಎಂದು ಪತ್ರಕರ್ತರಿಗೆ ಸಿಎಂ ತಿಳಿಸಿದ್ದಾರೆ.
ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಮನ್ವಯ ಸಾಧಿಸಲು, ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರದಿಂದ ತ್ವರಿತಗತಿಯಲ್ಲಿ ಒಪ್ಪಿಗೆ ಪಡೆದುಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಯೋಜನೆ ಸಮ್ಮತಿ ಸಮಿತಿ (ಪ್ರಾಜೆಕ್ಟ್ ಕ್ಲಿಯರೆನ್ಸ್ ಕಮಿಟಿ) ರಚನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಸಿಎಂ, ರಾಜ್ಯದ ಅನೇಕ ಯೋಜನೆಗಳು ಕೇಂದ್ರದಲ್ಲಿ ಬಾಕಿ ಉಳಿದುಕೊಂಡಿವೆ. ದಾಖಲಾತಿಗಳನ್ನು ತ್ವರಿತಗತಿಯಲ್ಲಿ ಸಿದ್ಧಪಡಿಸುವುದು, ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪೂರಕ ದಾಖಲೆಗಳನ್ನು ಜೋಡಿಸುವುದು ಸೇರಿ ಯೋಜನೆಗಳ ಜಾರಿಗೆ ಅನುಕೂಲವಾಗುವಂತೆ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಸಮಿತಿಗೆ ಉನ್ನತ ಸಚಿವರು ಹಾಗೂ ತಾವು ಖುದ್ದಾಗಿ ಅಗತ್ಯ ಸಲಹೆಗಳನ್ನೂ ನೀಡುತ್ತಿರುತ್ತೇವೆ ಎಂದು ಹೇಳಿದರು.
ರಾಜ್ಯದ ಸಂಸದರ ಸಭೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಕರೆಸಿಕೊಂಡ ಸಿಎಂ ಬೊಮ್ಮಾಯಿ, ಸಂಸದರು ಮತ್ತು ರಾಜ್ಯದ ಕೇಂದ್ರ ಮಂತ್ರಿಗಳ ಉಪಸ್ಥಿತಿಯಲ್ಲೇ ಮೇಕೆದಾಟು ಸೇರಿ ವಿವಿಧ ನೀರಾವರಿ ಯೋಜನೆಗಳ ಕುರಿತ ಮನವಿಗಳನ್ನು ಸಲ್ಲಿಸಿದರು. ರಾಜ್ಯದ ನೆಲ ಜಲಕ್ಕೆ ಸಂಬಂಧಿಸಿ ಎಲ್ಲ ಸಂಸದರ ನಿಯೋಗ ಕೊಂಡೊಯ್ದರೆ ಹೆಚ್ಚಿನ ಪರಿಣಾಮ ಇರುತ್ತದೆ. ಮುಂದಿನ ದಿನಗಳಲ್ಲಿ ಇದೇ ರಣನೀತಿಯನ್ನು ರಾಜ್ಯ ಸರ್ಕಾರ ಅನುಸರಿಸಲಿದೆ ಎಂದ ಬೊಮ್ಮಾಯಿ, ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ಸಿಗುವಂತೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆ. ಮಹದಾಯಿ ನದಿ ವ್ಯಾಪ್ತಿಯ ಕಳಸ-ಬಂಡೂರಿ ಯೋಜನೆಗೆ ಪರಿಸರ-ಅರಣ್ಯ ಸಮ್ಮತಿ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೊಷಿಸುವಂತೆ ಮನವಿ ಮಾಡಿದ್ದೇವೆ ಎಂದರು. ಕೃಷ್ಣಾ ನದಿ ವ್ಯಾಜ್ಯದ ಐತೀರ್ಪಿನ ಗೆಜೆಟ್ ನೋಟಿಫಿಕೇನ್ ಮಾಡುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ.
ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ರಾಜ್ಯದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಚರ್ಚೆ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಸೇರಿ ಬೇರೆ ಬೇರೆ ಚುನಾವಣೆಗಳಿವೆ, ಅವುಗಳನ್ನು ಎದುರಿಸುವ ಸವಾಲಿನ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ವರಿಷ್ಠರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಲು ಅಹರ್ನಿಶಿ ಕೆಲಸ ಮಾಡುತ್ತೇನೆ ಎಂದರು.
ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕೆಲ ಬದಲಾವಣೆಗಳನ್ನು ತಂದು ಆಡಳಿತದ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಸಿಎಂ ಸಚಿವಾಲಯದಲ್ಲಿ ಕ್ರೀಯಾಶೀಲವಾಗಿರುವ ಅಧಿಕಾರಿಗಳ ಪಟ್ಟಿಯನ್ನು ಮಾತ್ರ ನೀಡುವಂತೆ ಹಿರಿಯ ಅಧಿಕಾರಿಯೊಬ್ಬರಿಗೆ ಸೂಚಿಸಿರುವ ಸಿಎಂ, ವಿಳಂಬ ನೀತಿ ಅನುಸರಿಸುವ ಸೋಮಾರಿತನ ಮಾಡುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಬದಲಿಸಬೇಕು ಎಂದು ಸಲಹೆ ನೀಡಿದ್ದಾರೆ. ನೀವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗದೆ ಹೋದರೆ, ನಾನೇ ಖುದ್ದು ಆ ಕೆಲಸ ಮಾಡಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದ ಯಾವುದೇ ನಿರ್ಧಾರ, ತೀರ್ವನಗಳು ಆದೇಶವಾಗಿ ತಳಮಟ್ಟಕ್ಕೆ ತಲುಪಲು ಮುಖ್ಯಮಂತ್ರಿ ಸಚಿವಾಲಯ ವೇಗವಾಗಿ ದಕ್ಷತೆಯಿಂದ ಕೆಲಸ ಮಾಡಬೇಕು. ಅದಕ್ಕೆ ಅಗತ್ಯವಿರುವ ಪ್ರಾಮಾಣಿಕ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗ ತಲಾಶ್ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ತಮ್ಮ ಕಚೇರಿ ಅಲ್ಲದೆ, ಸಚಿವಾಲಯದಲ್ಲಿಯೂ ಕೆಲ ಬದಲಾವಣೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.