ಹನಿಮೂನ್​ಗೆಂದು ಮೇಘಾಲಯಕ್ಕೆ ಹೋದ ನವದಂಪತಿ ದಿಢೀರ್​ ನಾಪತ್ತೆ! ಅಷ್ಟಕ್ಕೂ ಏನಾಯಿತು? Indore couple

Indore couple
Published on

Indore couple : ಹನಿಮೂನ್​ಗಾಗಿ ಮೇಘಾಲಯದ ಶಿಲ್ಲಾಂಗ್​ಗೆ ಹೋಗಿದ್ದ ಮಧ್ಯಪ್ರದೇಶದ ಇಂದೋರ್​ ಮೂಲದ ನವದಂಪತಿ ದಿಢೀರ್​ ಕಾಣೆಯಾಗಿದ್ದು, ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಏಪ್ರಿಲ್ ಬಳಿಕ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಪ್ರವಾಸಿಗರು ಕಣ್ಮರೆಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ.

ಸಾರಿಗೆ ಉದ್ಯಮಿ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಕೊನೆಯ ಬಾರಿಗೆ ಮೇ 23 ರಂದು ಕಾಣಿಸಿಕೊಂಡರು. ದಂಪತಿ ಗುವಾಹಟಿ ಮೂಲಕ ಶಿಲ್ಲಾಂಗ್‌ಗೆ ಪ್ರಯಾಣಿಸಿ, ಸುಮಾರು 60 ಕಿ.ಮೀ ದೂರದಲ್ಲಿರುವ ಸೊಹ್ರಾ (ಚಿರಾಪುಂಜಿ) ಗೆ ಭೇಟಿ ನೀಡಲು ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದಿದ್ದರು. ಆದರೆ, ಮರುದಿನ ಬಾಡಿಗೆಗೆ ಪಡೆದ ಆಕ್ಟಿವಾ ಸ್ಕೂಟರ್ ಜನಪ್ರಿಯ ರಮಣೀಯ ಮಾರ್ಗದಲ್ಲಿರುವ ಸೊಹ್ರಾರಿಮ್ ಎಂಬ ಹಳ್ಳಿಯ ಬಳಿ ಕೈಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಂದಹಾಗೆ, ರಘುವಂಶಿ ಮತ್ತು ಸೋನಮ್​ ಮೇ 11 ರಂದು ಅದ್ಧೂರಿಯಾಗಿ ವಿವಾಹವಾದರು ಮತ್ತು ಮೇ 20ರಂದು ತಮ್ಮ ಹನಿಮೂನ್​ ಪ್ರಯಾಣವನ್ನು ಪ್ರಾರಂಭಿಸಿದರು. ಶಿಲ್ಲಾಂಗ್‌ಗೆ ಬರುವ ಮೊದಲು ಅವರು ಗುವಾಹಟಿಯ ಮಾ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಂದ ಮೇಘಾಲಯಕ್ಕೆ ತೆರಳಿದರು.

ಈ ಬಗ್ಗೆ ರಾಜಾ ಅವರ ತಾಯಿ ರೀನಾ ರಘುವಂಶಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕೊನೆಯ ಬಾರಿಗೆ ಮೇ 23 ರಂದು ದಂಪತಿ ಜತೆ ಮಾತನಾಡಿದೆ. ತಮ್ಮ ಪ್ರಯಾಣದ ಸಮಯದಲ್ಲಿ ಅವರು ಏನು ತಿನ್ನುತ್ತಿದ್ದರು? ಮತ್ತು ಎಲ್ಲಿಗೆ ಹೋಗುತ್ತಿದ್ದರು? ಎಂಬ ಮಾಹಿತಿಯನ್ನು ನನಗೆ ನೀಡಿದರು. ಅದೇ ನನ್ನ ಕೊನೆಯ ಸಂವಹನವಾಗಿತ್ತು. ಅಂದಿನಿಂದ ಅವರಿಬ್ಬರ ಫೋನ್‌ ಕಾಲ್​ ಬಂದಿಲ್ಲ. ಮೇ 24 ರಿಂದಲೂ ಅವರ ಮೊಬೈಲ್​ ಫೋನ್​ಗಳು ಸ್ವಿಚ್ ಆಫ್ ಆಗಿವೆ ಎಂದು ಹೇಳಿದ್ದಾರೆ.

ರಾಜಾ ಅವರ ಸಹೋದರ ಸಚಿನ್ ರಘುವಂಶಿ ಮಾತನಾಡಿ, ಆರಂಭದಲ್ಲಿ ಕಳಪೆ ನೆಟ್‌ವರ್ಕ್ ಇರಬಹುದು ಅಂದುಕೊಂಡೆವು ಆದರೆ, ಎಷ್ಟೇ ಬಾರಿ ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹೀಗಾಗಿ ತುಂಬಾ ಭಯವಾಗುತ್ತಿದೆ. ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಸಂಬಂಧಿಕರನ್ನು ಒಳಗೊಂಡ ಜಂಟಿ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಶೋಧ ತಂಡಗಳು ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಅರಣ್ಯದ ಹಾದಿಗಳು ಮತ್ತು ಬಂಡೆಗಳನ್ನು ಶೋಧಿಸುತ್ತಿವೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಈ ಪ್ರದೇಶದ ಭೂಪ್ರದೇಶ ಬಹಳ ಸುಂದರವಾಗಿದೆ. ಆದರೆ, ದಟ್ಟವಾದ ಕಾಡುಗಳು, ಆಳವಾದ ಕಮರಿಗಳು ಮತ್ತು ಇಳಿಜಾರುಗಳು ರಕ್ಷಣಾ ಪ್ರಯತ್ನಗಳನ್ನು ಕಷ್ಟಕರವಾಗಿಸುತ್ತವೆ ಎಂದು ಸೊಹ್ರಾ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ದಂಪತಿಯ ಕೊನೆಯ ಲೊಕೇಶನ್​ ಶಿಲ್ಲಾಂಗ್‌ನ ಓಸ್ರಾ ಬೆಟ್ಟದಲ್ಲಿ ಪತ್ತೆಯಾಗಿದ್ದು, ಸೂಕ್ಷ್ಮ ಪ್ರದೇಶವಾದ ಅಲ್ಲಿ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಹಳ್ಳದ ಬಳಿ ಪತ್ತೆಯಾಗಿದೆ. ಅಪರಾಧ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಹತ್ತಿರದ ರೆಸಾರ್ಟ್ ಬಗ್ಗೆಯೂ ತನಿಖೆ ನಡೆಯುತ್ತಿದೆ. ರಾಜಾ ಅವರ ಸಹೋದರ ವಿಪಿನ್ ಮತ್ತು ಸೋನಮ್ ಅವರ ಸಹೋದರ ಗೋವಿಂದ್ ಸೇರಿದಂತೆ ಸಂಬಂಧಿಕರು ಇಂದೋರ್‌ನಿಂದ ವಿಮಾನದಲ್ಲಿ ಬಂದು ಹುಡುಕಾಟದಲ್ಲಿ ಸಹಾಯ ಮಾಡುತ್ತಿದ್ದಾರೆ.

ಸ್ಥಳೀಯ ಅಪರಾಧಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಈ ಪ್ರದೇಶದ ರೆಸಾರ್ಟ್ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ನವದಂಪತಿ ಅಲ್ಲಿಗೆ ಭೇಟಿ ನೀಡಿದ್ದಾರೆಯೇ ಅಥವಾ ಅಲ್ಲಿಯೇ ಉಳಿದಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಅವರು ಮೇಘಾಲಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಕುಮಾರ್ ತ್ರಿಪಾಠಿ ಅವರನ್ನು ನಿಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ತುಳಸಿರಾಮ್ ಸಿಲಾವತ್, ರಾಜಾ ಅವರ ಕುಟುಂಬದೊಂದಿಗೆ ಮಾತನಾಡಿ, ಅವರಿಗೆ ಸಂಪೂರ್ಣ ರಾಜ್ಯ ಸರ್ಕಾರದ ಬೆಂಬಲದ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net