

ನವದೆಹಲಿ: ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಕೆಲವು ದಿನಗಳ ಹಿಂದೆ ಸಂಸತ್ತಿನ ಮಹಿಳಾ ಸದಸ್ಯೆಯರೊಂದಿಗಿನ ಒಂದು ಸೆಲ್ಫಿಯನ್ನು ಆಕ್ಷೇಪಾರ್ಹ ಶೀರ್ಷಿಕೆಯೊಂದಿಗೆ ಶೇರ್ ಮಾಡಿ ಸಖತ್ ಟ್ರೋಲ್ ಆಗಿದ್ದರು. ಇದೀಗ ಅವರ ಮತ್ತೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನ ತರೂರ್, ಆರು ಜನ ಸಂಸದೆಯರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿಯ ಶೀರ್ಷಿಕೆಯಲ್ಲಿ “ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ” ಎಂದು ಟ್ವೀಟ್ ಮಾಡಿದ್ದು ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿತ್ತು. ಮಹಿಳೆಯರ ಬಗ್ಗೆ ಈ ರೀತಿಯ ಕಾಮೆಂಟ್ ಎಷ್ಟು ಸಮಂಜಸ ಎಂದು ಜನ ಕೇಳಿದ್ದರು.
ಇದೀಗ ಶಶಿ ತರೂರ್ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಸೆಲ್ಫಿಗೆ ಪೋಸ್ ಮಾಡುತ್ತಿರುವಂತಿರುವ ಫೋಟೋವೊಂದು ವೈರಲ್ ಆಗಿದೆ. ಇತ್ತೀಚೆಗೆ ನವದೆಹಲಿಯ ಸಂಸತ್ ಆವರಣದಲ್ಲಿ ಕೆಲವು ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಧರಣಿ ನಡೆದ ಸಂದರ್ಭದ ಚಿತ್ರ ಇದಾಗಿದೆ.
ಗಾಂಧಿ ಪ್ರತಿಮೆಯ ಮುಂದೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಬಗ್ಗಿ ಮೊಬೈಲ್ ಸ್ಕ್ರೀನಿನತ್ತ ಮುಖ ಮಾಡಿರುವ ಈ ಫೋಟೋವನ್ನು ಲೇಖಕಿಯೊಬ್ಬರು ಟ್ವೀಟ್ ಮಾಡಿದ್ದು, "ಇದಕ್ಕೆ ಶೀರ್ಷಿಕೆ ಕೊಡಿ" ಎಂದಿದ್ದಾರೆ. ಪ್ರತಿಕ್ರಿಯಿಸಿರುವ ಟ್ವಿಟರಿಗರು ತರೂರ್ರ ಹಿಂದಿನ ಟ್ವೀಟನ್ನು ಉಲ್ಲೇಖಿಸಿ ಬಗೆಬಗೆಯ ಕಾಮೆಂಟು ಮಾಡುವುದರೊಂದಿಗೆ, ಮೀಮ್ಗಳನ್ನೂ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಪ್ರೊಫೆಸರ್ ಈ ಚಿತ್ರವನ್ನು ಶೇರ್ ಮಾಡಿ, "ಇದೇನು, ನೀವು ಪಾರ್ಲಿಮೆಂಟಿಗೆ ಸೆಲ್ಫಿ ತೆಗೆಯೋಕೆ ಹೋಗ್ತೀರಾ?" ಎಂದು ಪ್ರಶ್ನಿಸಿದ್ದಾರೆ.