

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6 ರವರೆಗೆ ಅಂದರೆ ಆರು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ನಿನ್ನೆ ಮಧ್ಯರಾತ್ರಿ 12.51ರ ಸಮಯದಲ್ಲಿ ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದ್ದು, ಇಂದು(ಮೇ 31) ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಅಗತ್ಯವಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದೆ.
ಎಸ್ಐಟಿ ಮನವಿ ಪುರಸ್ಕರಿಸಿದ ಕೋರ್ಟ್, ಪ್ರಜ್ವಲ್ ರೇವಣ್ಣನನ್ನು ಏಳು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಎಸ್ಐಟಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯಕ್ ಅವರು ವಾದ ಮಂಡಿಸಿದರೆ, ಪ್ರಜ್ವಲ್ ಪರ ಅರುಣ್ ವಾದ ಮಂಡಿಸಿದರು.
ಎಸ್‌ಐಟಿ ಕಚೇರಿಯಲ್ಲೇ ರಾತ್ರಿ ಕಳೆದ ಪ್ರಜ್ವಲ್ ಅವರನ್ನು ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು.
ಈ ಪರೀಕ್ಷೆಯ ನಂತರ ಪೊಲೀಸರು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ಎಸ್‌ಐಟಿ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು.