ಮಧ್ಯಪ್ರದೇಶದಲ್ಲಿ ಆಡಳಿತಪರ ಅಲೆ! ಗೇಮ್​ಚೇಂಜರ್​ ಆದ ಲಾಡ್ಲಿ ಬಹನಾ ಯೋಜನೆ

MP Election
Published on

‘ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿ ಮಧ್ಯಪ್ರದೇಶವಿದೆ. ಮಧ್ಯಪ್ರದೇಶದವರ ಮನಸ್ಸಿನಲ್ಲಿ ಮೋದಿ ಇದ್ದಾರೆ’- ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಚುನಾವಣಾ ರ್ಯಾಲಿಗಳಲ್ಲಿ ಈ ಮಾತನ್ನು ಹೇಳಲು ಮರೆಯುತ್ತಿರಲಿಲ್ಲ. ಈಗ ಮಧ್ಯಪ್ರದೇಶದಲ್ಲಿ ಮತ್ತೆ ಕಮಲ ಅರಳಿದೆ. ಪ್ರಚಂಡ ಬಹುಮತದ ಮೂಲಕ ಹಿಂದಿ ಹೃದಯನಾಡನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಾಲಿ ಲೋಕಸಭೆಯ ಕೆಲ ಸದಸ್ಯರನ್ನು ರಾಜ್ಯ ರಾಜಕಾರಣಕ್ಕೆ ಕಳಿಸಿದ ಪ್ರಯೋಗವೂ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ಖಾತೆ ತೆರೆಯುವಲ್ಲಿ ವಿಫಲವಾಗಿವೆ. ಪಕ್ಷೇತರರು ಯಾವ ಕ್ಷೇತ್ರದಲ್ಲೂ ಗೆದ್ದಿಲ್ಲ. ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ಒಂದು ಸ್ಥಾನ ತನ್ನದಾಗಿಸಿಕೊಂಡಿದೆ. 2018ರಲ್ಲಿ ನಾಲ್ವರು ಪಕ್ಷೇತರರು, ಬಿಎಸ್​ಪಿಯ ಇಬ್ಬರು ಮತ್ತು ಸಮಾಜವಾದಿ ಪಕ್ಷದ ಒಬ್ಬ ಅಭ್ಯರ್ಥಿ ಗೆಲುವು ದಾಖಲಿಸಿದ್ದರು.

ಚೌಹಾಣ್ ಭರ್ಜರಿ ಗೆಲುವು

ಬುಧನಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಮಸ್ತಾಲ್ ಅವರನ್ನು 1,04,974 ಮತಗಳ ಅಂತರದಿಂದ ಸೋಲಿಸಿ, ಭರ್ಜರಿ ಗೆಲುವು ದಾಖಲಿಸಿದ್ದಾರೆ.

28 ಮತಗಳ ಅಂತರದ ಗೆಲುವು!

ಶಾಜಾಪುರದ ಬಿಜೆಪಿ ಅಭ್ಯರ್ಥಿ ಅರುಣ್ ಭೀಮಾವದ್ ಅವರು ತಮ್ಮ ಎದುರಾಳಿ ಕಾಂಗ್ರೆಸ್ಸಿನ ಹುಕುಮ್ ಸಿಂಗ್ ಕರಾಡಾ ಅವರನ್ನು ಕೇವಲ ಏಳು ಮತಗಳ ಅಂತರದಿಂದ ಪರಾಭವಗೊಳಿಸುತ್ತಿದ್ದಂತೆ, ಮತಎಣಿಕೆ ಕೇಂದ್ರದ ಎದುರು ಉದ್ವಿಗ್ನ ಪರಿಸ್ಥಿತಿ ನೆಲೆಸಿತು. ಕಾಂಗ್ರೆಸ್ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದರು. ಕರಾಡಾ ಅವರ ಮನವಿಯ ಮೇರೆಗೆ ಮತಗಳ ಮರುಎಣಿಕೆ ನಡೆದು, ಅರುಣ್ ಭೀಮಾವದ್ 28 ಮತಗಳ ಅಂತರದಿಂದ ಗೆದ್ದರು.

ಮಹಿಳೆಯರ ಮನಗೆದ್ದ ಲಾಡಲಿ ಬಹನಾ

‘ಬಿಜೆಪಿ ಗೆಲುವಿನಲ್ಲಿ ಲಾಡಲಿ ಬಹನಾ ಯೋಜನೆ ಗೇಮ್ೇಂಜರ್ ಆಗಿ ಕೆಲಸ ಮಾಡಿದೆ. ಇದರ ಶ್ರೇಯಸ್ಸು ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ರಿಗೆ ಸಲ್ಲುತ್ತದೆ’ ಎಂದು ಮುಕ್ತಕಂಠದಿಂದ ಪ್ರಶಂಸಿಸಿದವರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ. ಮುಖ್ಯಮಂತ್ರಿ ಚೌಹಾಣ್ ಕೂಡ ಮತದಾನಕ್ಕೆ ಮುಂಚೆಯೇ, ‘ಲಾಡಲಿ ಬಹೆನ್ ಆಶೀರ್ವಾದ ನಮಗೆ ದೊರೆಯಲಿದೆ’ ಎಂದು ವಿಶ್ವಾಸದಿಂದ ಹೇಳಿದ್ದರು.

ಏನಿದು ಯೋಜನೆ?

* ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ವಿತ್ತೀಯ ನೆರವು ನೀಡುವ ಯೋಜನೆ ಇದು. 2023 ಜನವರಿ 28ಕ್ಕೆ ‘ಮುಖ್ಯಮಂತ್ರಿ ಲಾಡಲಿ ಬಹನಾ (ಮುದ್ದಿನ/ಅಕ್ಕರೆಯ ಸಹೋದರಿ)’ ಯೋಜನೆಯನ್ನು ಘೋಷಿಸಿದ ಶಿವರಾಜ್ ಸಿಂಗ್, ಪ್ರತಿ ತಿಂಗಳು 1 ಸಾವಿರ ರೂ. ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ತಲುಪಿಸಲಾಗುವುದು ಎಂದರು. 2023 ಮಾರ್ಚ್ 15ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿತು.

* ಆರು ತಿಂಗಳ ನಂತರ (2023 ಸೆಪ್ಟೆಂಬರ್​ನಲ್ಲಿ) ನೆರವಿನ ಮೊತ್ತವನ್ನು 1 ಸಾವಿರದಿಂದ 1,250 ರೂ.ಗೆ ಹೆಚ್ಚಿಸಲಾಯಿತು.

* ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ ಅಥವಾ ಐದು ಎಕರೆ ಇಲ್ಲವೆ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ವಿಧದಲ್ಲಿ ಅವಕಾಶ ನೀಡಲಾಗಿದೆ.

* ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಗೆದ್ದ ಪ್ರಮುಖರು

* ಕೇಂದ್ರ ಸಚಿವ ಕೈಲಾಸ್ ವಿಜಯವರ್ಗಿಯ್ ಕಾಂಗ್ರೆಸ್ಸಿನ ಸಂಜಯ್ ಶುಕ್ಲಾರನ್ನು 57,719 ಮತಗಳಿಂದ ಸೋಲಿಸಿದ್ದಾರೆ.

* ಗಾಡರ್​ವಾರಾ ಕ್ಷೇತ್ರದಿಂದ ಸಂಸದ ಉದಯ್ ಪ್ರತಾಪ್ ಸಿಂಗ್ 56,789 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಪಟೇಲ್​ರನ್ನು ಪರಾಭವಗೊಳಿಸಿ, ವಿಧಾನಸಭೆ ಪ್ರವೇಶಿಸಿದ್ದಾರೆ.

* ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಕಮಲನಾಥ್ ಬಿಜೆಪಿ ಅಭ್ಯರ್ಥಿ ವಿವೇಕ್ ಬಂಟಿ ಸಾಹುರನ್ನು ಪರಾಭವಗೊಳಿಸಿ, ವಿಜಯದ ನಗೆ ಬೀರಿದ್ದಾರೆ.

* ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ನರಸಿಂಹಪುರ ಕ್ಷೇತ್ರದಿಂದ ಕಾಂಗ್ರೆಸ್​ನ ಲಖನ್ ಸಿಂಗ್ ಎದುರು 32,095 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಾಂಗ್ರೆಸ್ ಪರಾಭವಗೊಂಡಿದ್ದೇಕೆ?

* ಪಕ್ಷದೊಳಗೆ ಮುಸುಕಿನ ಗುದ್ದಾಟ. ಸಂಘಟನೆ ದುರ್ಬಲಗೊಂಡಿರುವುದು. ಸಮರ್ಥ ನಾಯಕತ್ವದ ಕೊರತೆ. ಚುನಾವಣೆಯ ಮುನ್ನವೇ ಸಿಎಂ ಆಗಲು ಏರ್ಪಟ್ಟ ಸ್ಪರ್ಧೆ.

* ಗೆಲುವಿನ ಬಗ್ಗೆ ಅತಿಯಾದ ವಿಶ್ವಾಸ. ಬಿಜೆಪಿ ನಾಯಕರ ಬಗೆಗಿನ ವೈಯಕ್ತಿಕ ಟೀಕೆಗಳನ್ನು ಮತದಾರ ಇಷ್ಟಪಡಲಿಲ್ಲ.

* ಕಾಂಗ್ರೆಸ್​ಗೆ ಚೌಹಾಣ್ ಸರ್ಕಾರವನ್ನು ವಿರೋಧಿಸಲು ಬಲವಾದ ಕಾರಣಗಳು ಸಿಗಲಿಲ್ಲ. ಹಾಗಾಗಿ, ಅದು ಮೋದಿಯವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತ ಬಂತು.

* ಕಾಂಗ್ರೆಸ್ ಗೆದ್ದರೆ ಕೇಂದ್ರದ ಯೋಜನೆಗಳ ಲಾಭ ತಮಗೆ ಸಿಗಲಿಕ್ಕಿಲ್ಲ ಎಂಬ ಆತಂಕ ಮತದಾರರಿಗೂ ಕಾಡಿತು.

* 2019-20ರಲ್ಲಿ 15 ತಿಂಗಳ ಅವಧಿಯ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಅರಿತಿದ್ದ ಮತದಾರ, ಅವನ್ನು ದೂರವಿಡಲು ಬಯಸಿದ.

* ಕಾಂಗ್ರೆಸ್ ನಾಯಕರು ಸನಾತನ ಧರ್ಮವನ್ನು ಬಹಿರಂಗವಾಗಿ ಟೀಕಿಸಿದ್ದು, ಅಂಥ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದು ಮುಳುವಾಗಿ ಪರಿಣಮಿಸಿತು.

ಸೋತ ಹುರಿಯಾಳುಗಳು: ನಿವಾಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಫಗ್ಗನ್ ಕುಲಸ್ತೆ ಕಾಂಗ್ರೆಸ್ ಅಭ್ಯರ್ಥಿ ಚೈನ್ ಸಿಂಗ್ ವರಖಡೆ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ದಾಖಲೆ ನಿರ್ವಿುಸಿದ ಶಿವರಾಜ್

ದೀರ್ಘಾವಧಿಗೆ ಮುಖ್ಯಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರವಾಗಿರುವ 64 ವರ್ಷದ ಶಿವರಾಜ್ ಸಿಂಗ್ ಚೌಹಾನ್ ಈ ಮೂಲಕ ದಾಖಲೆ ನಿರ್ವಿುಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ‘ಮಾಮಾಜೀ’ ಎಂದೇ ಖ್ಯಾತಿಯಾಗಿರುವ ಇವರು 2005ರಲ್ಲಿ ಮಧ್ಯಪ್ರದೇಶ ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷಾಂತ್ಯದಲ್ಲಿ ನಡೆದ ಚುನಾವಣೆಯ ಬಳಿಕ ಮುಖ್ಯಮಂತ್ರಿಯಾದರು. 2005ರಿಂದ 2023ರ ಅವಧಿಯಲ್ಲಿ 15 ತಿಂಗಳನ್ನು ಬಿಟ್ಟರೆ (2018-20ರ ಅವಧಿಯಲ್ಲಿ ಕಾಂಗ್ರೆಸ್ಸಿನ ಕಮಲನಾಥ್ ಮುಖ್ಯಮಂತ್ರಿಯಾಗಿದ್ದರು) ಶಿವರಾಜ್ ಅವರೇ ಮುಖ್ಯಮಂತ್ರಿ. 17 ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಅವರು, ಈಗ 5ನೇ ಬಾರಿ ಸಿಎಂ ಆಗಲು ಸಜ್ಜಾಗಿದ್ದಾರೆ.

ಮೋದಿ-ಶಿವರಾಜ್ ಜನಪ್ರಿಯತೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಅಂತರವೇ ಹುಬ್ಬೇರಿಸುವಂಥದ್ದು. ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ದೆಹಲಿ ವರಿಷ್ಠರು ಘೊಷಿಸದಿದ್ದರೂ, ಚೌಹಾಣ್ ಜನಪ್ರಿಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟ. ಕೇವಲ ಮೋದಿ ಜನಪ್ರಿಯತೆಯಿಂದ ರಾಜ್ಯ ಚುನಾವಣೆಯನ್ನು ಇಷ್ಟೊಂದು ಅಂತರದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ. ಹೀಗಾಗಿ, ಮಧ್ಯಪ್ರದೇಶದ ಸಾಧನೆಗೆ ಚೌಹಾಣ್​ರಿಗೆ ಕ್ರೆಡಿಟ್ ಅರ್ಹವಾಗಿ ಸಲ್ಲಬೇಕು. 2005ರಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಆದರೆ, 2020ರ ಮಾರ್ಚ್ ತಿಂಗಳಲ್ಲಿ ಕೆಲ ಶಾಸಕರು ಕಾಂಗ್ರೆಸ್ ಬೆಂಬಲ ಹಿಂಪಡೆದ ಪರಿಣಾಮ ಶಿವರಾಜ್ ನೇತೃತ್ವದಲ್ಲಿ ಚುನಾವಣೆ ಸೋತ ಒಂದೇ ವರ್ಷದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. ತಮ್ಮನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೊಷಣೆ ಮಾಡದಿದ್ದರೂ, ನಿರಂತರ ಪ್ರಚಾರದ ಮೂಲಕ ಜನಮನ ಸೆಳೆದ ಶಿವರಾಜ್ ಸಿಂಗ್, ‘ನಾನು ಮತ್ತೊಮ್ಮೆ ಸಿಎಂ ಆಗುವುದು ನಿಮಗೆ ಬೇಡವೇ’ ಎಂಬ ಭಾವನಾತ್ಮಕ ಮನವಿಯನ್ನೂ ಮಾಡಿದ್ದರು. ಈ ಮನವಿ ಬಗ್ಗೆ ನಾನಾ ಬಗೆಯ ವಿಶ್ಲೇಷಣೆ ಕೇಳಿಬಂದರೂ, ರಾಜ್ಯದ ಮತದಾರ ಶಿವರಾಜರೇ ನಮ್ಮ ನಾಯಕ ಎಂದು ತೀರ್ಪು ನೀಡಿದ್ದಾರೆ. ದಿಲ್ಲಿ ವರಿಷ್ಠರು ಚೌಹಾಣ್​ರನ್ನು ಮತ್ತೆ ಸಿಎಂ ಆಗಿ ನೇಮಕ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಅವರ ಬದಲಿಗೆ ಮತ್ತೊಬ್ಬರನ್ನು ಆಯ್ಕೆ ಮಾಡುವಂತಹ ಸಾಹಸದ ಕೆಲಸಕ್ಕೆ ವರಿಷ್ಠರು ಕೈಹಾಕುವ ಬಗ್ಗೆ ಅನುಮಾನವಿದೆ. ಬಿಜೆಪಿ ಗೆಲುವಿನಲ್ಲಿ ರಾಜ್ಯದ ಮಹಿಳಾ ಮತದಾರರೂ ನಿರ್ಣಾಯಕ ಪಾತ್ರವಹಿಸಿದ್ದಾರೆ. ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 1000 ರೂ. ಹಣಕಾಸು ನೆರವು ನೀಡುವ ಲಾಡ್ಲಿ ಬೆಹ್ನಾ ಯೋಜನೆ ಗ್ರಾಮೀಣ ಮತದಾರರನ್ನು ಬಹುವಾಗಿ ಸೆಳೆದಿದೆ. ಚೌಹಾಣ್​ರ ಮಹಿಳೆಯನ್ನು ಪೂಜ್ಯಭಾವದಿಂದ ನೋಡುವ ಕನ್ಯಾಪೂಜಾ ಕಾರ್ಯಕ್ರಮಗಳೂ ಯಶಸ್ವಿಯಾಗಿವೆ. ರಾಜ್ಯಾದ್ಯಂತ ಮನೆ-ಮನಗಳಲ್ಲಿ ಮಾಮಾಜೀ ಎಂದೇ ಗುರುತಿಸಿಕೊಂಡಿರುವ ಚೌಹಾಣ್, ಸಜ್ಜನ ರಾಜಕಾರಣಿ ಎಂದೇ ಖ್ಯಾತಿ. ಅಹಂಕಾರವಿಲ್ಲದ, ಜನಸಾಮಾನ್ಯನಂತೆ ನಡೆದುಕೊಳ್ಳುವ ಚೌಹಾಣ್ ವ್ಯಕ್ತಿತ್ವ ಪಕ್ಷಕ್ಕೆ ಮತ್ತೊಮ್ಮೆ ಲಾಭತಂದುಕೊಟ್ಟಿರುವುದು ಸುಳ್ಳಲ್ಲ. 2023ರ ಜನವರಿಯಿಂದ ನವೆಂಬರ್ 15ರ ಚುನಾವಣಾ ಪ್ರಚಾರದ ಕೊನೆ ದಿನದ ತನಕ ಸುಮಾರು 1,000 ಕಾರ್ಯಕ್ರಮಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಅಂದರೆ, ದಿನಕ್ಕೆ ಸರಾಸರಿ ಮೂರು ಕಾರ್ಯಕ್ರಮ. ಚುನಾವಣೆ ಘೊಷಣೆಯಾಗುವ ಮುನ್ನ ಅವರು 53 ಜಿಲ್ಲೆಗಳಲ್ಲಿ 53 ಮಹಿಳಾ ರ್ಯಾಲಿಗಳನ್ನು ನಡೆಸಿದ್ದರು. ಚುನಾವಣಾ ದಿನಾಂಕ ಘೊಷಣೆ ಬಳಿಕ 37 ದಿನಗಳಲ್ಲಿ 165 ರ್ಯಾಲಿಗಳಲ್ಲಿ ಭಾಷಣ ಮಾಡಿದ್ದಾರೆ.

ಗೆದ್ದ ಸಂಸದರಿಗೆ 14 ದಿನ ಗಡುವು

ವಿಧಾನಸಭಾ ಚುನಾವಣೆಗಳಲ್ಲಿ ಬಹಳಷ್ಟು ಸಂಸದರೂ ಸ್ಪರ್ಧಿಸಿದ್ದಾರೆ. ಆ ಪೈಕಿ ಗೆದ್ದವರಿಗೆ ಇನ್ನೆರಡೇ ವಾರ ಅಧಿಕಾರ. ಏಕೆಂದರೆ ಗೆದ್ದ ಸಂಸದರು ಇನ್ನು 14 ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿದೆ. ಅಂದರೆ ಅವರು ತಮ್ಮ ಸಂಸದ ಅಥವಾ ಶಾಸಕ ಸ್ಥಾನಗಳಲ್ಲಿ ಯಾವುದಾದರೂ ಒಂದಕ್ಕೆ ರಾಜೀನಾಮೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net