More

    3 ರಾಜ್ಯಗಳ ಭರ್ಜರಿ ಗೆಲುವು 2024ರ ಹ್ಯಾಟ್ರಿಕ್​ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ

    ನವದೆಹಲಿ: ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ತನ್ನ ಅಧಿಕಾರ ವ್ಯಾಪ್ತಿಯನ್ನು ದೇಶದಲ್ಲಿ ಮತ್ತಷ್ಟು ವಿಸ್ತರಿಸಿಕೊಂಡಿದೆ. ಇಂದಿನ ಫಲಿತಾಂಶ ಲೋಕಸಭಾ ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ಬಿಂಬಿಸಲಾಗಿದ್ದು, ಅಭೂತಪೂರ್ವ ಗೆಲುವು ದಾಖಲಿಸಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದೆ.

    ಸಂಭ್ರಮಾಚರಣೆ ನಡುವೆ ಪ್ರಧಾನಿ ಮೋದಿ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ವಿಜಯವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಇಂದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಕಲ್ಪನೆಯು ಗೆದ್ದಿದೆ, ಆತ್ಮ ನಿರ್ಭರ ಭಾರತದ ದೃಢ ಸಂಕಲ್ಪ ಗೆದ್ದಿದೆ, ವಂಚಿತರಿಗೆ ಆದ್ಯತೆಯ ವಿಚಾರ ಗೆದ್ದಿದೆ ಹಾಗೂ ದೇಶದ ಅಭಿವೃದ್ಧಿಗಾಗಿ ರಾಜ್ಯಗಳ ಅಭಿವೃದ್ಧಿಯ ಕಲ್ಪನೆಗೆ ಜಯ ಸಿಕ್ಕಿದೆ. ಈ ಮೂರು ರಾಜ್ಯಗಳು ಗೆಲುವು 2024ರ ಲೋಕಸಭೆಯಲ್ಲಿ ಹ್ಯಾಟ್ರಿಕ್​ ಗೆಲುವಿನ ಗ್ಯಾರೆಂಟಿ ಎಂದು ಕೆಲವರು ಹೇಳುತ್ತಿದ್ದಾರೆ ಎಂದರು.

    ಇಂದು ಪ್ರತಿಯೊಬ್ಬ ಬಡವ ತಾನೂ ಗೆದ್ದೆ ಎಂದು ಹೇಳುತ್ತಿದ್ದಾರೆ. ಪ್ರತಿಯೊಬ್ಬ ವಂಚಿತ ವ್ಯಕ್ತಿಯ ಮನಸ್ಸಿನಲ್ಲಿ ತಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂಬ ಭಾವನೆ ಇರುತ್ತದೆ. ಈ ಚುನಾವಣೆಯಲ್ಲಿ ಗೆದ್ದೆ ಎಂದು ಪ್ರತಿಯೊಬ್ಬ ರೈತರು ಹೇಳುತ್ತಾರೆ. ಇಂದು ಬುಡಕಟ್ಟು ಸಮುದಾಯದ ಪ್ರತಿಯೊಬ್ಬ ಸಹೋದರ-ಸಹೋದರಿಯರು ಗೆಲುವು ತನ್ನದೆಂದು ಭಾವಿಸಿ ಸಂತೋಷಪಡುತ್ತಿದ್ದಾರೆ. ನನ್ನ ಮೊದಲ ಮತ ನನ್ನ ಗೆಲುವಿಗೆ ಕಾರಣ ಎಂದು ಮೊದಲ ಬಾರಿಗೆ ಮತದಾನ ಮಾಡಿದ ಮತದಾರ ಹೆಮ್ಮೆಯಿಂದ ಹೇಳುತ್ತಾನೆ ಎಂದು ಹೇಳಿದರು.

    ಈ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುವ ಪ್ರಯತ್ನಗಳು ನಡೆದಿವೆ. ನನಗೆ ನಾರಿ ಶಕ್ತಿ, ಯುವ ಶಕ್ತಿ, ಕಿಸಾನ್ ಮತ್ತು ಗರೀಬ್ ಪರಿವಾರ ಎಂಬ ನಾಲ್ಕು ಜಾತಿಗಳು ಮುಖ್ಯ ಎಂದು ನಾನು ಹೇಳುತ್ತಲೇ ಇದ್ದೆ. ದೇಶದ ‘ನಾರಿ ಶಕ್ತಿ’ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿಯ ಬಾವುಟ ಉತ್ತುಂಗಕ್ಕೇರಲಿದೆ ಎಂದು ‘ನಾರಿ ಶಕ್ತಿ’ ನಿರ್ಧರಿಸಿದೆ ಎಂದು ನಾನು ಭಾಗವಹಿಸಿದ ಸಮಾವೇಶಗಳಲ್ಲಿ ಆಗಾಗ ಹೇಳುತ್ತಿದ್ದೆ. ಅದು ಇಂದು ನಿಜವಾಗಿದೆ ಎಂದರು.

    ನನ್ನ ರಾಜಕೀಯ ಜೀವನದಲ್ಲಿ, ನಾನು ಯಾವಾಗಲೂ ಭವಿಷ್ಯವಾಣಿಗಳಿಂದ ದೂರವಿದ್ದೇನೆ. ಆದರೆ, ಈ ಬಾರಿ ನಾನು ಈ ನಿಯಮವನ್ನು ಮುರಿದಿದ್ದೇನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ವಾಪಸಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದೆ. ಅದು ನಿಜವಾಗಿದೆ. ಏಕೆಂದರೆ, ರಾಜಸ್ಥಾನದ ಜನರ ಮೇಲೆ ನನಗೆ ವಿಶ್ವಾಸವಿತ್ತು ಎಂದು ಹೇಳಿದರು.

    ಭಾರತವು ಮುನ್ನಡೆದಾಗ ರಾಜ್ಯವು ಮುಂದುವರಿಯುತ್ತದೆ ಮತ್ತು ಪ್ರತಿ ಕುಟುಂಬದ ಜೀವನವು ಸುಧಾರಿಸುತ್ತದೆ ಎಂದು ಭಾರತದ ಮತದಾರನಿಗೆ ತಿಳಿದಿದೆ. ಹಾಗಾಗಿ ಮತದಾರರು ನಿರಂತರವಾಗಿ ಬಿಜೆಪಿಯನ್ನು ಆಯ್ಕೆ ಮಾಡುತ್ತಿದ್ದಾರೆ. ನಾವಿಂದು ಅದರ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪರ್ಯಾಯವಿಲ್ಲ. ಬಿಜೆಪಿ 2 ದಶಕಗಳಿಂದ ಅಧಿಕಾರದಲ್ಲಿದ್ದು, ಇಷ್ಟು ಸುದೀರ್ಘ ಸಮಯದ ನಂತರವೂ ಬಿಜೆಪಿ ಮೇಲೆ ಜನರ ವಿಶ್ವಾಸ ನಿರಂತರವಾಗಿ ಹೆಚ್ಚುತ್ತಿದೆ. ಡಿಸೆಂಬರ್ 3ರ ನಂತರ ನಾವು ಇಲ್ಲಿ ಸರ್ಕಾರ ರಚಿಸುವ ಹಿನ್ನೆಲೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಜನರನ್ನು ಆಹ್ವಾನಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಛತ್ತೀಸ್‌ಗಢದ ಮೊದಲ ಸಾರ್ವಜನಿಕ ಸಭೆಯಲ್ಲೇ ಹೇಳಿದ್ದೆ ಎಂದರು.

    ಈ ಫಲಿತಾಂಶಗಳ ಪ್ರತಿಧ್ವನಿಯು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಫಲಿತಾಂಶಗಳ ಪ್ರತಿಧ್ವನಿ ಇನ್ನಷ್ಟು ದೂರ ಹೋಗಲಿದೆ. ಈ ಚುನಾವಣೆಗಳ ಪ್ರತಿಧ್ವನಿ ಜಗತ್ತಿನಾದ್ಯಂತ ಕೇಳಿಬರಲಿದೆ. ದೇಶವನ್ನು ದುರ್ಬಲಗೊಳಿಸುವ ರಾಷ್ಟ್ರವಿರೋಧಿ ಅಂಶಗಳನ್ನು ಮತ್ತು ಆಲೋಚನೆಗಳನ್ನು ಬಲಪಡಿಸುವಂತಹ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ನನ್ನ ಸಲಹೆಯಾಗಿದೆ ಎಂದು ವಿಪಕ್ಷಗಳಿಗೆ ಮಾತಿನ ಚಾಟಿ ಬೀಸಿದರು.

    ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ರಾಹುಲ್​ ಗಾಂಧಿ ಹೇಳಿದ್ದಿಷ್ಟು…

    ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು​: ವಿಶೇಷ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ತೆಲಂಗಾಣದಲ್ಲಿ ಫಲಿಸಲಿಲ್ಲ ಪವನ್ ಕಲ್ಯಾಣ್ ಪ್ರಯತ್ನ: ಠೇವಣಿ ಕಳೆದುಕೊಂಡ ಜನಸೇನಾ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts