

ಶಿವಮೊಗ್ಗ: ಸಮಾಜಕ್ಕೆ ಶಿಕ್ಷಣ ನೀಡುತ್ತಿದ್ದ ಅಂದಿನ ಸಿನಿಮಾಗಳು ಸದಾ ಸ್ಮರಣೀಯ. ತುಂಬು ಕುಟುಂಬದ ಅವಶ್ಯಕತೆ, ವ್ಯಕ್ತಿತ್ವ ವಿಕಸನ, ಸಮಾಜಕ್ಕೆ ಕೊಡುಗೆ ನೀಡಲು ಪ್ರೇರಣೆ ಉಂಟು ಮಾಡುತ್ತಿದ್ದ ಸಿನಿಮಾಗಳು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಂದು ಕುಟುಂಬ ಸಹಿತ ಸಿನಿಮಾ ನೋಡಲು ಮುಜುಗರವಾಗುವ ಸಂದರ್ಭ ಸೃಷ್ಟಿಯಾಗುತ್ತಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಸಿನಿಮಾ ವಸ್ತು ನೋಡುವ ಬಗೆ ಮತ್ತು ಶಿಕ್ಷಣ ಎಂಬ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ತಲೆಮಾರಿಗೆ ಅವಶ್ಯಕತೆಯಿರುವ ಸತ್ವಯುತ ಸಿನಿಮಾಗಳು ರೂಪುಗೊಳ್ಳಲು ಇತಿಹಾಸದ ಸಿನಿಮಾಗಳು ಆಶಾಕಿರಣವಾಗಿವೆ ಎಂದರು.
ಕನ್ನಡ ಚಿತ್ರರಂಗಕ್ಕೆ ಅದ್ಭುತ ಕಲಾತ್ಮಕ ಸಿನಿಮಾಗಳನ್ನು ನೀಡುತ್ತ ಮೇರು ಸದೃಶ್ಯದ ವ್ಯಕ್ತಿತ್ವವಾಗಿ ರೂಪುಗೊಂಡವರು ಗಿರೀಶ್ ಕಾಸರವಳ್ಳಿ. ಸತ್ವಯುತ ಸಿನಿಮಾಗಳು ರೂಪಿಸುವ ಅವಶ್ಯಕತೆಗಳಿಗೆ ನಮ್ಮ ಪೂರ್ವಿಕ ಸಿನಿಮಾ ನಿರ್ದೇಶಕರು, ಕಲಾವಿದರು ಆಶಾಕಿರಣವಾಗಿ ನಿಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇಂದು ಬಿಡುಗಡೆಯಾಗಿ ನಾಳೆ ಮಾಯವಾಗುವ ಸಿನಿಮಾಗಳೇ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಿದೆ. ಸಿನಿಮಾ ಟಾಕೀಸ್ ಮಾಯವಾಗಿ ದೊಡ್ಡ ಮಾಲ್‌ಗಳಾಗಿವೆ. ಕಲಿಯುವ ವಿದ್ಯೆಯಲ್ಲಿ ಏರಿಳಿತವಾದರೂ ಪರವಾಗಿಲ್ಲ, ಸಂಸ್ಕಾರ ಕಲಿಸುವಲ್ಲಿ ಏರಿಳಿತವಾಗದಿರಲಿ. ವಿದ್ಯೆ ಕಲಿತವರು ಭ್ರಷ್ಟರಾಗಬಹುದು, ಅದರೇ ಸಂಸ್ಕಾರ ಕಲಿತವರು ಎಂದೂ ದಾರಿ ತಪ್ಪುವುದಿಲ್ಲ ಎಂದು ಹೇಳಿದರು.
ಪ್ರಾಚಾರ್ಯ ಡಾ. ಎನ್.ಕೆ. ಚಿದಾನಂದ, ಎನ್‌ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ರಾಷ್ಟ್ರೀಯ ಶಿಕ್ಷಣ ಎ.ಎನ್.ರಾಮಚಂದ್ರ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಚಾಲಕ ಎಚ್.ಯು.ವೈದ್ಯನಾಥ ಇದ್ದರು.
ಇದೇ ವೇಳೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬೋ ಕುದುರೆಯನ್ನೇರಿ ಮತ್ತು ಕೂರ್ಮಾವತಾರ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಸೆ.14ರಂದು ಈ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ.