

ನವದೆಹಲಿ: ಇಂದು (ಜು.23) ಲೋಕಸಭೆಯಲ್ಲಿ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಪ್ರಾರಂಭಕ್ಕೂ ಮುನ್ನ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿ, ಬಜೆಟ್ ಮಂಡನೆ ಆರಂಭಿಸಿದರು. ಹಲವು ವರ್ಗಕ್ಕೆ ಮಹತ್ವದ ಬಜೆಟ್ ಘೋಷಿಸಿರುವ ವಿತ್ತ ಸಚಿವೆ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಉದ್ಯೋಗ ವಲಯಕ್ಕೂ ಬಜೆಟ್ನಲ್ಲಿ ಸಿಹಿ ಹಂಚಿದ್ದಾರೆ.
ಇನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ ಕೌನ್ಸಿಲ್ ಫಾರ್ ಲೆದರ್ ಎಕ್ಸ್‌ಪೋರ್ಟ್ಸ್‌ನ ಪ್ರಾದೇಶಿಕ ಅಧ್ಯಕ್ಷರು (CLE) ಮೋತಿಲಾಲ್ ಸೇಥಿ," ನಮ್ಮ ಸಂಸ್ಥೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಇಂದಿನ ಕೇಂದ್ರ ಬಜೆಟ್ನಲ್ಲಿ ಉದ್ಯೋಗ ವರ್ಗಕ್ಕೆ ಉತ್ತಮ ಯೋಜನೆಗಳು ಲಭಿಸಿವೆ" ಎಂದರು.
"ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರಿಗೂ ಈ ಬಜೆಟ್ ಲಾಭದಾಯಕವಾಗಿದೆ. ಕೌಶಲ್ಯ ಅಭಿವೃದ್ಧಿ ಕೂಡ ಬಹಳ ಮುಖ್ಯವಾದದ್ದು. ಇದು ಕೂಡ ಬಜೆಟ್ನಲ್ಲಿ ಕೇಳಿಬಂದಿದೆ. ಆಮದು ಸುಂಕದ ಮೇಲೆ ವಿನಾಯಿತಿಗಳನ್ನು ನೀಡಿರುವುದು ನಿಜಕ್ಕೂ ಸ್ವಾಗತಾರ್ಹ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯವಾಗಲಿದೆ. ನಮ್ಮ ಬೆಳವಣಿಗೆಯ ಮಾದರಿ ಸಹ ಹೆಚ್ಚಾಗಿದೆ. ಒಟ್ಟಾರೆಯಾಗಿ ಚರ್ಮದ ಉದ್ಯಮಕ್ಕೆ ಬಜೆಟ್ ಉತ್ತಮವಾಗಿದ್ದು, ಸಾಮಾನ್ಯ ಜನರಲ್ಲಿ ಕಾಡುತ್ತಿದ್ದ ಉದ್ಯೋಗ ಸಮಸ್ಯೆ ನಿಯಂತ್ರಣಗೊಳ್ಳುವ ಲಕ್ಷಣಗಳು ಕಂಡುಬಂದಿವೆ. ಇದು ನಮ್ಮ ಆರ್ಥಿಕತೆಗೂ ಒಳ್ಳೆಯದು" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).