ನೆರವಿಗೆ ಮಿಡಿಯುತ್ತಿದೆ ತಾಯಿ ಹೃದಯ; ಪ್ರೀತಿಸಿ ಮದುವೆಯಾದವಳನ್ನು ಕ್ಯಾನ್ಸರ್ ಎಂದು ತಿಳಿದು ಬಿಟ್ಟುಹೋದ ಪತಿ

page 8 3
Published on

| ಗಂಗಾಧರ್ ಬೈರಾಪಟ್ಟಣ

ರಾಮನಗರ: ಪ್ರೀತಿಸಿ ಮದುವೆಯಾದ ಪತಿ ಕುಡಿತದ ಚಟಕ್ಕೆ ಬಿದ್ದಿ್ದೂ ಅಲ್ಲದೇ ಪತ್ನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತಿದ್ದಂತೆ ನಾಪತ್ತೆಯಾದ. ಪರಿಣಾಮ ಆಕೆ ಮೂವರು ಮಕ್ಕಳ ಜತೆ ಕಡುಕಷ್ಟದಲ್ಲಿ ಜೀವನ ಸವೆಸುವಂತಾಗಿದೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಆ ಬಡ ಜೀವಕ್ಕೆ ಈಗ ಮಕ್ಕಳೇ ದಿಕ್ಕು. ಮಕ್ಕಳಿಗೂ ಅಮ್ಮನೇ ಸರ್ವಸ್ವ.

ಚನ್ನಪಟ್ಟಣ ಮೂಲದ ಗಿರಿಜಾ 20 ವರ್ಷಗಳ ಹಿಂದೆ ಬೆಂಗಳೂರಿನ ಸಂಬಂಧಿಯೊಬ್ಬರ ಮನೆಗೆ ತೆರಳಿದ್ದರು. ಈ ವೇಳೆ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಂದಿಗೆ ಬೆಳೆದ ಸ್ನೇಹ ಪ್ರೀತಿಯಾಗಿ ಬದಲಾಯಿತು. ಮದುವೆ ಆಗುವಂತೆ ಆತ ಪೀಡಿಸುತ್ತಿದ್ದ. ಅಂತಿಮವಾಗಿ ಎರಡೂ ಕುಟುಂಬಗಳ ವಿರೋಧದ ನಡುವೆ ಮದುವೆಯೂ ಆಯಿತು. ನಂತರ ಬೆಂಗಳೂರು ಬಿಟ್ಟು ತಮಿಳುನಾಡಿನ ಶಿವಗಂಗಾ ಜಿಲ್ಲೆಗೆ ತೆರಳಿದ ದಂಪತಿ, 6-7 ವರ್ಷ ಅಲ್ಲೇ ಜೀವನವನ್ನೂ ನಡೆಸಿದರು. ಮುದ್ದಾದ ಮೂವರು ಮಕ್ಕಳೂ ಜನಿಸಿದವು. ಆದರೆ ಗಂಡನ ಕುಡಿತದ ಚಟ ಸಂಸಾರಕ್ಕೆ ಎರವಾಯಿತು. ಗಂಡನ ಹುಚ್ಚಾಟದಿಂದ ಚನ್ನಪಟ್ಟಣಕ್ಕೆ ವಾಪಸ್ ಬಂದ ಗಿರಿಜಾ, ಹಲವಾರು ಬಾರಿ ಗಂಡನ ಮನೆಗೂ ತವರಿಗೂ ಅಲೆದರು. ಅಂತಿಮವಾಗಿ 11 ವರ್ಷಗಳ ಹಿಂದೆ ರಾಮನಗರದಲ್ಲಿ ಈ ಕುಟುಂಬ ನೆಲೆ ಕಂಡಿತು.

ಪ್ರೀತಿಸಿ ಕೈ ಹಿಡಿದ ಹೆಂಡತಿ ಮತ್ತು ತನ್ನ ಮಕ್ಕಳ ಭವಿಷ್ಯಕ್ಕೆ ಆಸರೆಯಾಗಬೇಕಾದ ಗಂಡ ಕುಡಿತದ ದಾಸನಾಗಿ ಕಂಟಕವಾದ. ಅಂದಿನಿಂದ ಇಂದಿನವರೆಗೂ ಕಷ್ಟದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ ತಾಯಿ-ಮಕ್ಕಳು.

ಗಂಡ ನಾಪತ್ತೆ: ಗಾರೆ ಕೆಲಸ ಮಾಡುತ್ತಿದ್ದ ಗಂಡ, ದುಡಿದಿದ್ದನ್ನೆಲ್ಲ ಹೆಂಡದಂಗಡಿಗೆ ಹಾಕುತ್ತಿದ್ದ. ಈ ನಡುವೆ 6 ವರ್ಷಗಳ ಹಿಂದೆ ಪತ್ನಿ ಎದೆ ಮೇಲೆ ಕಾಣಿಸಿಕೊಂಡ ಸಣ್ಣ ಗಡ್ಡೆ, ಕ್ಯಾನ್ಸರ್ ಎಂದು ಗೊತ್ತಾಗುತ್ತಿದ್ದಂತೆ, ಆತ ನಾಪತ್ತೆಯಾದ. ಈ ಬಗ್ಗೆ ಮಾವನ ಮನೆಯವರನ್ನು ಗಿರಿಜಾ ಕೇಳಿದರೆ ‘ಆತ ಇಲ್ಲಿಗೆ ಬಂದಿಲ್ಲ’ ಎನ್ನುವ ಉತ್ತರವಷ್ಟೇ ಬರುತ್ತದೆ. ಅಂದು ಹೋದ ಗಂಡ ಇಂದಿಗೂ ಕಾಣಿಸಿಲ್ಲ.

ಅಮ್ಮನಾಗಿ ಅಳುತ್ತಿದ್ದಾರೆ: ಹಿರಿಯ ಮಗ ಪಿಯುಸಿವರೆಗೂ ಓದಿದ್ದು, ಅಮ್ಮನ ಕಷ್ಟ ನೋಡಲಾರದೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ. ಎರಡನೇ ಮಗ ಪಿಯುಸಿ ಪರೀಕ್ಷೆ ಬರೆದಿದ್ದರೆ, ಮಗಳು ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಬ್ರೆಸ್ಟ್ ಕ್ಯಾನ್ಸರ್, ಮೂಳೆ ಕ್ಯಾನ್ಸರ್ ಹೀಗೆ ಹಲವಾರು ರೋಗಗಳಿಗೆ ಗಿರಿಜಾ ತುತ್ತಾಗಿದ್ದರೂ ಹೂವು ಮಾರಾಟ ಮಾಡುತ್ತಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಜತೆಗೆ, ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ 8 ತಿಂಗಳಿಂದ ಉಲ್ಬಣಿಸಿದ ರೋಗ ಈಗ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿದ ಮನೆ ಬಾಗಿಲಿಗೆ ಔಷಧ ತಲುಪಿಸುವ ಕಾರ್ಯಕ್ರಮದ ವೇಳೆ ಗಿರಿಜಾ ಕುಟುಂಬದ ಸಂಕಷ್ಟ ಬೆಳಕಿಗೆ ಬಂದಿದೆ. ರಾಮನಗರ ಐಜೂರಿನಲ್ಲಿರುವ ನಾಗನಕಟ್ಟೆಯ ಸಣ್ಣ ಜೋಪಡಿಯಂಥ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಕುಟುಂಬಕ್ಕೆ ಸ್ವಂತ ಸೂರು ಇಲ್ಲ. 4-5 ತಿಂಗಳಿಂದ ಮನೆ ಬಾಡಿಗೆಯನ್ನೂ ಕಟ್ಟಲಾಗದ ಈ ಕುಟುಂಬ ಕಣ್ಣೀರಲ್ಲಿ ಕೈ ತೊಳೆದಿದೆ ಎನ್ನುವುದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್. ವರದರಾಜಗೌಡ ಅವರು ಗಿರಿಜಾ ಮನೆಗೆ ಭೇಟಿ ನೀಡಿದಾಗ ಮನವರಿಕೆ ಆಗಿದೆ.

ಔಷಧ ಪೂರೈಕೆ ವೇಳೆ ಗಿರಿಜಾ ಅವರ ಕುಟುಂಬ ಸಂಕಷ್ಟದಲ್ಲಿರುವ ಬಗ್ಗೆ ಗೊತ್ತಾಯಿತು. ನಾನು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಸೇರಿ ಹಲವರು ಅವರಿಗೆ ಒಂದು ಸಣ್ಣ ಮನೆ ಕೊಡಿಸುವ ನಿರ್ಧಾರ ಮಾಡಿದ್ದೇವೆ. ಸಾಧ್ಯ ವಾದಷ್ಟು ಚಿಕಿತ್ಸೆ ಕೊಡಿಸುತ್ತೇವೆ. ಆದರೂ ಎಲ್ಲರೂ ಕೈ ಜೋಡಿಸಿದರೆ ಮಕ್ಕಳ ಭವಿಷ್ಯಕ್ಕೆ ನೆರವಾಗಲಿದೆ. | ಆರ್.ವರದರಾಜಗೌಡ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net