

ಅಮ್ಮನಿಲ್ಲದೆ ಬದುಕಿಲ್ಲ, ಅವಳೊಂದು ದೊಡ್ಡ ಭಾವಶಕ್ತಿ. ಅವಳ ಅಂತಃಕರಣದ ಲೋಕದಲ್ಲಿ ಬೆಳೆದ ಮಕ್ಕಳು ಎಷ್ಟೇ ದೊಡ್ಡವರಾದರೂ, ಆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಪ್ರೇರಣೆಯನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ, ಜೀವನದಲ್ಲಿ "ತಾಯಿಯೇ ದೇವರು' ಎಂದೆನಿಸಿದ ಸಂದರ್ಭಗಳನ್ನು ಹಂಚಿಕೊಳ್ಳುವಂತೆ ನೀಡಿದ ಕರೆಗೆ ಓದುಗರಿಂದ ಬಂದಿರುವ ಪ್ರತಿಕ್ರಿಯೆ ಅಭೂತಪೂರ್ವ. ಅಮ್ಮನ ದಿನದ ನಿಮಿತ್ತ ಅಂಥ ಕೆಲ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.
ಹಂಪಿಗೆ ಹೋಗ್ತೀಯಾ ಬಿಡು... ಅದು 1983-84ನೇ ಸಾಲಿನ ಶೈಣಿಕ ವರ್ಷ, ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಮುಖ್ಯೋಪಾಧ್ಯಾಯರು ಹಂಪಿಗೆ ಶೈಣಿಕ ಪ್ರವಾಸ ಹೋಗುವ ವಿಷಯ ತಿಳಿಸಿ, ಒಬ್ಬರಿಗೆ ಎಲ್ಲ ಖರ್ಚು ಸೇರಿಸಿ 25 ರೂ. ಕೊಡಬೇಕು ಎಂದರು. ಹಂಪಿಗೆ ಹೋಗಬೇಕು ಎಂಬ ಕಾತರದಿಂದ ಮನೆಗೆ ಓಡಿ, ತಾಯಿ ಬಳಿ ಹೇಳಿಕೊಂಡೆ. "ನನ್ನ ಹತ್ತಿರ ಹಣವಿಲ್ಲ. ನಿನ್ನ ತಂದೆಗೆ ಕೇಳುವುದಿಲ್ಲ. ನಾನೇ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿ ನಿನಗೆ ಹಣ ಹೊಂದಿಸಿ ಕೊಡುತ್ತೇನೆ' ಎಂದಳು. "ತಾಯಿಯನ್ನು ಕೂಲಿ ಕೆಲಸಕ್ಕೆ ಕಳುಹಿಸಿ ನಾನು ಹಂಪಿಗೆ ಹೋಗುವುದು ಬೇಕಾ?' ಎಂದೊಮ್ಮೆ ಪ್ರಶ್ನಿಸಿಕೊಂಡೆ. "ಅಮ್ಮ, ನೀನು ಕೂಲಿಗೆ ಹೋಗುವುದು ಬೇಡ. ಮುಂದೆ ಅನುಕೂಲವಾದಾಗ ಹಂಪಿಗೆ ಹೋದ ರಾಯಿತು' ಎಂದೆ. ತಾಯಿ ನನ್ನನ್ನು ತಬ್ಬಿಕೊಂಡು, "ನೀನು ಜಾಣ ಇದ್ದೀಯ, ನಮ್ಮ ಅರಿವೆ ನಮಗೆ ಗುರು. ಜೀವನದಲ್ಲಿ ಅರಿವನ್ನು ಇಟ್ಟುಕೊಂಡು ಸಾಗಿದರೆ ಯಶಸ್ಸು ಪಡೆಯಬಹುದು. ಮುಂದೆ ನೀನು ಹಂಪಿಗೆ ಹೋಗುತ್ತೀಯಾ' ಎಂದು ಕೆನ್ನೆಗೆ ಮುತ್ತಿಕ್ಕಿದಳು. ಮುಂದೆ ನಾನು ಬಿಎಡ್ ಪೂರ್ಣಗೊಳಿಸುವುದರಲ್ಲಿ ಅಮ್ಮ ಗರ್ಭಕೋಶದ ಕ್ಯಾನ್ಸರ್ನಿಂದ ತೀರಿಕೊಂಡಳು. ಜೀವನದಲ್ಲಿ ಹೇಗೆ ನಡೆಯಬೇಕು ಎಂದು ಕಲಿಸಿದ ತಾಯಿಗೆ ಹಂಪಿ ತೋರಿಸಲು ಆಗಲಿಲ್ಲ, ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಹಾಗೇ ಉಳಿಯತು.
| ಚಿನ್ನಪ್ಪ ಮೂರಶಿಳ್ಳಿನ ಶಿಕ್ಷಕರು, ಗಜೇಂದ್ರಗಡ