

ಆಗಂತುಕ ವಿವರಿಸಿದ. ‘ಹಜರತ್! ನಾನು ಪ್ರಯಾಣ ಮಾಡುತ್ತಿದ್ದ ದಾರಿಯ ಪಕ್ಕದಲ್ಲಿ ಒಂದು ಪೊದೆ ಇತ್ತು. ಅಲ್ಲಿಂದ ಚಿಲಿಪಿಲಿ ಧ್ವನಿ ಕೇಳಿ ಬಂದಿದ್ದರಿಂದ, ಇಣುಕಿ ನೋಡಿದೆ. ಅದರೊಳಗೆ ಎರಡು ಪಾರಿವಾಳದ ಮರಿಗಳು ಕುಳಿತಿದ್ದವು. ಅವುಗಳನ್ನು ನನ್ನ ದುಪ್ಪಟ್ಟದಲ್ಲಿ ಎತ್ತಿಕೊಂಡು ಮುಂದೆ ಹೊರಟೆನು. ಸ್ವಲ್ಪ ದೂರ ಹೋಗುವುದರೊಳಗಾಗಿ ಇನ್ನೊಂದು ದೊಡ್ಡ ಪಾರಿವಾಳ -ಬಹುಶಃ ಆ ಮರಿಗಳ ತಾಯಿ- ನನ್ನ ತಲೆಯ ಮೇಲೆ ಹಾರಿ ಬರುತ್ತಾ ಒದರಿಕೊಳ್ಳುತ್ತಿತ್ತು. ನಾನು, ಅದು ಏನು ಮಾಡುತ್ತದೆಯೋ ನೋಡೋಣ ಎಂದುಕೊಂಡು ನನ್ನ ದುಪ್ಪಟ್ಟದ ಬಟ್ಟೆಯನ್ನು ಬಿಚ್ಚಿ ಹಿಡಿದರೆ ಅದು ಸಹ ತನ್ನ ಮರಿಗಳೊಂದಿಗೆ ಕುಳಿತಿಬಿಟ್ಟಿತು! ಇದೋ ಅದು ತನ್ನ ಮರಿಗಳ ಸಂಗಡ ಇನ್ನು ಇಲ್ಲೇ ಇದೆ!’ ಎಂದು ತನ್ನ ದುಪ್ಪಟ್ಟ ಬಟ್ಟೆಬಿಚ್ಚಿ ಹಜರತ್ರ ಮುಂದೆ ಇರಿಸಿದನು.
ಹಜರತರು ಆ ಹಕ್ಕಿಗಳನ್ನು ನೋಡಿದರು. ಇವುಗಳನ್ನು ಈಗಲೇ ತೆಗೆದುಕೊಂಡು ಹೋಗಿ ಅವು ಎಲ್ಲಿದ್ದವೋ ಅಲ್ಲೇ, ಆ ಗೂಡಿನಲ್ಲಿ ಬಿಟ್ಟು ಬಾ ಎಂದರು. ಹಕ್ಕಿಗಳನ್ನು ಕಳಿಸಿಕೊಟ್ಟ ನಂತರ ಹಜರತರ(ಸ) ಮುಖ ಗಂಭೀರವಾಯಿತು. ಅಂತಮುಖಿಯಾದರು. ಅವರು ಬಹಿಮುಖರಾಗುವ ಹೊತ್ತಿಗೆ ಅವರ ಕಣ್ಣಾಲಿಗಳಲ್ಲಿ ನೀರಿತ್ತು. ಗದ್ಗದ ಸ್ವರದಿಂದ ಹಜರತರು ಹೇಳಿದರು, ‘‘ನಿಜವಾಗಿಯೂ ಆತನು ಹೇಳಿದಂತೆ ಇದು ಅತ್ಯಂತ ಆಶ್ಚರ್ಯವೇ! ತನ್ನ ಮರಿಗಳಿಗೆ ಎಲ್ಲಿ, ಏನು ಹಾನಿಯಾದೀತೋ ಎಂಬ ಕಳವಳದಿಂದ ಆ ತಾಯಿ ಹಕ್ಕಿ ಹೀಗೆ ಹಾರಿ ಬಂದು, ತನ್ನ ಮರಿಗಳನ್ನು ಬಿಡಲಾರದೆ ವಾತ್ಸಲ್ಯದಿಂದ ಕೂಡಿಕೊಂಡಿತು. ಆದರೆ, ಇದಕ್ಕಿಂತ ಆಶ್ಚರ್ಯವೆಂದರೆ ಅಲ್ಲಾಹನ(ದೇವರು) ವಾತ್ಸಲ್ಯ. ತನ್ನ ಸೃಷ್ಟಿಯ ಕ್ಷೇಮಕ್ಕಾಗಿ ಆತನು ಪಡುವ ಕಳವಳ, ನೀಡುವ ಗಮನ!