ಮಗಳನ್ನು ಹೊತ್ತೊಯ್ಯಲು ಬಂದಿದ್ದ ಚಿರತೆಯ ವಿರುದ್ಧ ಹೋರಾಡಿ ಗೆದ್ದ ತಾಯಿ!

leopard
Published on

ಮುಂಬೈ: ತಾಯಿ ಮಗಳಿಬ್ಬರು ಕಾಡಿಗೆ ತೆರಳಿದ್ದ ವೇಳೆ ಚಿರತೆಯೊಂದು ಬಾಲಕಿಯ ಮೇಲೆ ಎರಗಿದ್ದು, ಬಾಲಕಿಯ ತಾಯಿ ಚಿರತೆಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಚಂದ್ರಪುರ ನಗರದ ಬಳಿ ಇರುವ ಜುನೋನಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ತಾಯಿ ಅರ್ಚನಾ ತಮ್ಮ 5 ವರ್ಷದ ಮಗಳು ಪ್ರಜಕ್ತಾಳೊಂದಿಗೆ ಕಾಡಿಗೆ ತೆರಳಿದ್ದಳು. ಅಡುಗೆ ಮಾಡಲು ಏನಾದರೂ ಗೆಡ್ಡೆ ಗೆಣಸು ಸಿಗುತ್ತದೆಯೇ ಎಂದು ಹುಡುಕಲು ಅವರಿಬ್ಬರು ಕಾಡಿಗೆ ಹೋಗಿದ್ದರಂತೆ. ಈ ವೇಳೆ ಚಿರತೆಯೊಂದು ಪ್ರಜಕ್ತಾಳ ಮೇಲೆ ಎರಗಿದೆ. ಚಿರತೆ ತನ್ನ ಬಾಯಿಯನ್ನ ನೇರವಾಗಿ ಬಾಲಕಿಯ ತಲೆಗೆ ಹಾಕಿದೆ.

ತಕ್ಷಣ ಎಚ್ಚೆತ್ತುಕೊಂಡ ಅರ್ಚನಾ ಚಿರತೆಯನ್ನು ಓಡಿಸಲು ಪ್ರಯತ್ನಿಸಿದ್ದಾಳೆ. ಆಗ ಬಾಲಕಿಯನ್ನು ಬಿಟ್ಟ ಚಿರತೆ ಅರ್ಚನಾಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅದರೊಂದಿಗೆ ಆಕೆ ಕಷ್ಟಪಟ್ಟು ಹೋರಾಡಿದ್ದಾಳೆ. ಮತ್ತೆ ಆಕೆಯನ್ನು ಬಿಟ್ಟ ಚಿರತೆ ಬಾಲಕಿಯ ತಲೆಗೆ ಬಾಯಿ ಹಾಕಿದೆ. ಆಗ ಅಲ್ಲಿದ್ದ ಕೋಲನ್ನು ತೆಗೆದುಕೊಂಡ ಅರ್ಚನಾ ಚಿರತೆಗೆ ಹೊಡೆಯಲಾರಂಭಿಸಿದ್ದಾಳೆ. ಕೆಲ ಕ್ಷಣಗಳಾದ ಮೇಲೆ ಬಾಲಕಿಯನ್ನು ಅಲ್ಲೇ ಬಿಟ್ಟ ಚಿರತೆ ವಾಪಸು ಹೋಗಿದೆ. ತಾಯಿಯ ಪ್ರೀತಿಯ ಮುಂದೆ ಚಿರತೆ ಸೋತಿದೆ.

ಚಿರತೆ ಬಾಯಿಗೆ ಸಿಕ್ಕಿದ್ದ ಬಾಲಕಿ ಗಂಭೀರ ಗಾಯಾಳುವಾಗಿದ್ದಾಳೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net