ಕರೊನಾ ಗೆದ್ದ ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆ! ಶೇ. 70ಕ್ಕೂ ಹೆಚ್ಚಿದೆ ಈ ಸೋಂಕಿನ ಮರಣ ಪ್ರಮಾಣ!

monkey
Published on

ಬೀಜಿಂಗ್: ಕರೊನಾ ಸೋಂಕು ಪೂರ್ತಿ ವಿಶ್ವವೇ ತತ್ತರಿಸುವಂತೆ ಮಾಡಿಬಿಟ್ಟಿದೆ. ಕರೊನಾ ಮೊದಲು ಚೀನಾದಲ್ಲಿ ಪತ್ತೆಯಾಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅದೇ ಚೀನಾದಲ್ಲಿ ಮತ್ತೊಂದು ಭಯಾನಕ ಸೋಂಕು ಕಾಣಿಸಿಕೊಂಡಿದೆ.

ಚೀನಾದ ಬೀಜಿಂಗ್​ನಲ್ಲಿ ಕೆಲಸ ಮಾಡುತ್ತಿರುವ ಪಶು ವೈದ್ಯರೊಬ್ಬರಲ್ಲಿ ಮಂಕಿ ಬಿ ವೈರಸ್ ಪತ್ತೆಯಾಗಿದೆ. ಅವರು ಮೃತರಾಗಿ ಬರೋಬ್ಬರಿ ಒಂದೂವರೆ ತಿಂಗಳ ನಂತರ ಈ ವಿಚಾರವನ್ನು ಚೀನಾ ಬಾಯಿ ಬಿಟ್ಟಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲ ಈ ಸೋಂಕಿನ ಮರಣ ಪ್ರಮಾಣ ಶೇ. 70ರಿಂದ ಶೇ. 80!

ಸಂಸ್ಥೆಯೊಂದರಲ್ಲಿ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಪಶು ವೈದ್ಯರಿಗೆ ಏಪ್ರಿಲ್​ ತಿಂಗಳಲ್ಲೇ ಸೋಂಕು ಹರಡಿದೆ. ಎರಡು ಮೃತ ಮಂಗಗಳ ಶಸ್ತ್ರಚಿಕಿತ್ಸೆ ಮಾಡಿದ್ದ ಅವರಿಗೆ ಅದಾದ ಕೆಲವೇ ದಿನಗಳಲ್ಲಿ ವಾಂತಿ, ವಾಕರಿಕೆಯಂತಹ ಪ್ರಾರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಅದನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ಮಂಕಿ ಬಿ ವೈರಸ್ ಇರುವುದು ದೃಢವಾಗಿತ್ತು. ಎಷ್ಟೇ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ, ಅವರು ಮೇ 27ರಂದು ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಚೀನಾದ ಸಿಡಿಸಿ ಪತ್ರಿಕೆಯಲ್ಲಿ ಜುಲೈ 17ರಂದು ಪ್ರಕಟವಾಗಿದೆ.

ಮಂಕಿ ಬಿ ವೈರಸ್ ಈ ಹಿಂದೆ 1932ರಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾದಲ್ಲಿ ಇದೇ ಮೊದಲು ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾದ ಮೊದಲನೇ ವ್ಯಕ್ತಿಯೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಆತನ ಪ್ರಾರ್ಥಮಿಕ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ ಪ್ರಾಣಿಗಳಲ್ಲಿ ಸೋಂಕಿರುವ ಭಯವಿದ್ದು, ಅದರಿಂದ ಮನುಷ್ಯನೂ ಅಪಾಯದಲ್ಲಿರುವುದಂತೂ ಸತ್ಯ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net