ಮಾತೃಭಾಷೆಗೆ ಮಹತ್ವ ಕೊಟ್ಟರೂ ಕಡ್ಡಾಯವೇನಲ್ಲ

Education
Published on

34 ವರ್ಷಗಳ ಬಳಿಕ ರೂಪುಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಯ ಮುದ್ರೆ ಒತ್ತಿದೆ. ಹಲವು ಮಹತ್ವದ ಅಂಶಗಳು, ಶೈಕ್ಷಣಿಕ ಸುಧಾರಣೆಯ ಹೊಸ ದಾರಿಗಳನ್ನೂ ಒಳಗೊಂಡಿರುವ ಈ ನೀತಿಯ ಕುರಿತಾದ ಸಂಕ್ಷಿಪ್ತ ವಿಶ್ಲೇಷಣೆ ಮತ್ತು ಕೆಲ ತಜ್ಞರ ಅನಿಸಿಕೆಗಳು ಇಲ್ಲಿವೆ.

ರಾಘವ ಶರ್ಮಾ ನಿಡ್ಲೆ ನವ ದ ಹೆ ಲಿ

1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಸಲಹೆ ನೀಡಲಾಗಿದೆ. ಆದರೆ, ಮಾತೃಭಾಷೆ/ಪ್ರಾದೇಶಿಕ/ಸ್ಥಳೀಯ ಭಾಷೆಯಲ್ಲೇ ಶಿಕ್ಷಣ ನೀಡುವುದು ಕಡ್ಡಾಯ ಎಂಬ ವಾಕ್ಯವನ್ನೇನೂ ಇಲ್ಲಿ ಬಳಸಲಾಗಿಲ್ಲ. ಹೀಗಾಗಿ, ಕರ್ನಾಟಕದ ಮಟ್ಟಿಗೆ ಕಲಿಕೆಗೆ ಕನ್ನಡ ಭಾಷೆ ಕಡ್ಡಾಯವೇನಲ್ಲ. ಅಂದರೆ, ರಾಜ್ಯ ಸರ್ಕಾರಗಳು ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಅರ್ಥ ಬರುವಂತೆ ವಿವರಿಸಲಾಗಿದೆ.

‘ಶಾಲಾ ಶಿಕ್ಷಣವು ಕನಿಷ್ಠ 5ನೇ ತರಗತಿವರೆಗೆ, ಸಾಧ್ಯವಾದಲ್ಲಿ 8ನೇ ತರಗತಿವರೆಗೆ ಸ್ಥಳೀಯ ಭಾಷೆ/ಮಾತೃಭಾಷೆಯಲ್ಲಿ ಲಭ್ಯವಾಗಬೇಕು. ಅಗತ್ಯವೆನಿಸಿದೆಡೆ ಸುಲಭಸಾಧ್ಯವಾದ ದ್ವಿಭಾಷಾ ವಿಧಾನ ಅನುಸರಿಸಬೇಕು’ ಎಂದು ಶಿಕ್ಷಣ ನೀತಿ ಹೇಳುತ್ತದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿಯೇ ಕಲಿಕೆ ಕಡ್ಡಾಯ ಮಾಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ವಾದಿಸಿತ್ತಾದರೂ, ಸಾಂವಿಧಾನಿಕ ಅಂಶಗಳಿಗೆ ಮಹತ್ವ ನೀಡಿದ್ದ ಸುಪ್ರೀಂಕೋರ್ಟ್, ಕಲಿಕೆಯಲ್ಲಿ ಭಾಷೆಯನ್ನು ವಿದ್ಯಾರ್ಥಿ ಮೇಲೆ ಹೇರಲು ಬರುವುದಿಲ್ಲ ಎಂದು 2014ರಲ್ಲಿ ತೀರ್ಪು ನೀಡಿತ್ತು. ಇದಾದ ಬಳಿಕ, ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಕಲಿಕಾ ಮಾಧ್ಯಮವಾಗಿ ಪರಿಚಯಿಸಲಾಗಿದೆ. ಕನ್ನಡದಲ್ಲಿ ಬೋಧನೆ ಕಡ್ಡಾಯವಿರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಪ್ರಾದೇಶಿಕತೆಯ ಮಹತ್ವ ಅರಿಯಲು ಸಾಧ್ಯ. ಅಲ್ಲದೆ, ಸಣ್ಣ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಆಲೋಚನಾ ಶೈಲಿ ಮೂಡುವುದು ಮಾತೃಭಾಷೆಯಲ್ಲಿಯೇ ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ‘ನಾವು ಯಾವುದೇ ಭಾಷೆಯನ್ನು ಹೇರುವುದಿಲ್ಲ’ ಎಂದಿರುವ ಕೇಂದ್ರ ಸರ್ಕಾರ, ಮಾತೃಭಾಷಾ ಶಿಕ್ಷಣವನ್ನು ವಿದ್ಯಾರ್ಥಿ ಮತ್ತು ಹೆತ್ತವರ ಮೇಲೆ ಹೇರುವ ಸಾಹಸ ಮಾಡಿಲ್ಲ. ಮಾತೃಭಾಷೆ ಆದ್ಯತೆಯಾಗಬೇಕು ಎಂಬ ಕಿವಿಮಾತು ಹೇಳಿದೆ. ಹೀಗಾಗಿ, ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಇಂಗ್ಲಿಷ್ ಮಾಧ್ಯಮವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಸಲಹೆ ಕೇಳಲು ಖುಷಿಯಾಗುತ್ತದೆ. ಆದರೆ, ಹೆತ್ತವರ ಆಲೋಚನೆ ಬೇರೆಯದೇ ಆಗಿರುತ್ತದೆ’ ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

ನೇಮಕಾತಿಯಲ್ಲಿ ಸ್ಥಳೀಯ ಭಾಷೆಗೆ ಮಹತ್ವ: ನೇಮಕಾತಿಯಲ್ಲಿ ಸ್ಥಳೀಯರು ಹಾಗೂ ಸ್ಥಳೀಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಶಿಕ್ಷಕರಿಗೆ ಆದ್ಯತೆ ನೀಡಲು ಶಿಕ್ಷಣ ನೀತಿ ಒತ್ತು ನೀಡಿದೆ. ಅನೇಕ ರಾಜ್ಯಗಳಲ್ಲಿರುವಂತೆ ಶಿಕ್ಷಕರನ್ನು ಜಿಲ್ಲೆಗೆ ನೇಮಕ ಮಾಡಲಾಗುತ್ತದೆ. ಪಾರದರ್ಶಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮೂಲಕ ಸ್ಥಿರ ಅವಧಿ ಮತ್ತು ನಿಯಮ ಆಧಾರಿತ ವರ್ಗಾವಣೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಲಿಸಲು ಶಿಕ್ಷಕರಿಗೆ ಪ್ರೋತ್ಸಾಹಧನವನ್ನೂ ನೀಡಲು ಉದ್ದೇಶಿಸಲಾಗಿದೆ.

ಮಾತೃಭಾಷೆ ಶಿಕ್ಷಣಕ್ಕೆ ಸಂಬಂಧಿಸಿ ಶಿಕ್ಷಣ ನೀತಿಯಲ್ಲಿ ಏನಿದೆಯೋ ಅದುವೇ ಅಂತಿಮ. ಈ ಬಗ್ಗೆ ನಾನು ವೈಯಕ್ತಿಕ ಅಭಿಪ್ರಾಯ ಹೇಳಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.

| ಡಾ.ಎಂ.ಕೆ. ಶ್ರೀಧರ್ ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ

ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ(ಎನ್​ಇಪಿ) ಒಪ್ಪಿಗೆ ಸೂಚಿಸುವ ಮೂಲಕ ಹೊಸ ಇತಿಹಾಸ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಜ್ಞಾನದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಇದು ಅನುವು ಮಾಡಿ ಕೊಡುತ್ತದೆ. ಪ್ರಾಥಮಿಕದಿಂದ 5ನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣ ನೀಡಬೇಕೆಂಬ ರಾಜ್ಯದ ಬಹುವರ್ಷದ ಕನಸು ಈ ಬಾರಿ ನನಸಾಗುತ್ತಿದೆ. ಶಿಕ್ಷಣ ಅಭಿವೃದ್ಧಿಯಲ್ಲಿ ಸಮುದಾಯ ಮತ್ತು ತತ್ತ್ವಜ್ಞಾನಿಗಳ ಪಾತ್ರಕ್ಕೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಪದವಿ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈ ರೀತಿ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಯನ್ನು ಎನ್​ಇಪಿ ಹೊಂದಿದೆ.

| ಪ್ರೊ.ಎಂ.ಆರ್.ದೊರೆಸ್ವಾಮಿ ಶಿಕ್ಷಣ ಸುಧಾರಣೆಯ ಸಲಹೆಗಾರ

ಜ್ಞಾನ, ಕೌಶಲ ಹಾಗೂ ಆರ್ಥಿಕತೆ ಮುಂಚೂಣಿಯಲ್ಲಿ ತರಲು ಉದ್ದೇಶಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಏಕರೂಪ, ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ತಂತ್ರಜ್ಞಾನ ದೊಂದಿಗೆ ನೀಡುವಲ್ಲಿ ಉತ್ತಮವಾಗಿದೆ. ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಕೋನವುಳ್ಳ ನೀತಿ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಸಮಕಾಲೀನ ಜಾಗತಿಕ ಅಗತ್ಯಕ್ಕೆ ಪೂರಕವಾಗಿದೆ. ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವುದರಿಂದ ಶಿಕ್ಷಣದ ತಳಪಾಯ ಗಟ್ಟಿಗೊಳ್ಳುತ್ತದೆ.

| ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷ

ಕೇಂದ್ರ ಸರ್ಕಾರ ಈಗ ಮಾತೃಭಾಷೆಗೆ ಒತ್ತು ನೀಡಿರುವುದರಿಂದ ಮುಂದೊಂದು ದಿನ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್​ಗೆ ಬಂದಲ್ಲಿ, ನ್ಯಾಯಮೂರ್ತಿಗಳು ಮನಸ್ಸು ಬದಲಿಸಿದರೂ ಅಚ್ಚರಿ ಇಲ್ಲ.

| ಕೆ.ಎನ್. ಭಟ್ ಕನ್ನಡ ಸಾಹಿತ್ಯ ಪರಿಷತ್ ಪರ ಸುಪ್ರೀಂಕೋರ್ಟ್​ನಲ್ಲಿ ವಾದಿಸಿದ ವಕೀಲರು

ತರಗತಿ 30 ವಿದ್ಯಾರ್ಥಿಗಳಿಗೆ ಸೀಮಿತ

ಇನ್ನುಮುಂದೆ ಒಂದು ತರಗತಿ ಕೋಣೆಯಲ್ಲಿ 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕೂರುವಂತಿಲ್ಲ. 30 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಷ್ಟೇ ಅಲ್ಲಿರಬೇಕು ಎಂದು ಹೊಸ ಶೈಕ್ಷಣಿಕ ನೀತಿಯಲ್ಲಿ ಹೇಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಇಡೀ ಶಾಲೆಯನ್ನು ಓರ್ವ ಶಿಕ್ಷಕ ನಿಭಾಯಿಸುತ್ತಿರುವ ನಿದರ್ಶನಗಳಿವೆ. ಆದರೆ, ಹೊಸ ನೀತಿಯಿಂದಾಗಿ ಎಲ್ಲ ಶಾಲೆಗಳ ತರಗತಿಗಳಲ್ಲೂ 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವಂತಿಲ್ಲ. ಹೀಗಾದಲ್ಲಿ, ಹೊಸದಾಗಿ ಶಿಕ್ಷಕರ ನೇಮಕಾತಿಯೂ ಆಗಬೇಕು. ಆರ್ಥಿಕ-ಸಾಮಾಜಿಕ ಹಿಂದುಳಿದ ಪ್ರದೇಶದ ಮಕ್ಕಳಿರುವ ಶಾಲೆಗಳಲ್ಲಿ 1:25ರ (25 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ) ಅನುಪಾತದಲ್ಲಿ ಶಿಕ್ಷಣ ನೀಡಬೇಕು ಎಂದು ತಿಳಿಸಲಾಗಿದೆ.

ಮುಂಬಡ್ತಿಗೆ ಅರ್ಹತೆಯೇ ಮಾನದಂಡ ಶಿಕ್ಷಕರ ಶಿಕ್ಷಣ, ಸಾಮರ್ಥ್ಯ, ಕೌಶಲದ ಬಗ್ಗೆಯೂ ನೀತಿಯಲ್ಲಿ ರ್ಚಚಿಸಲಾಗಿದೆ. ವಿದ್ಯಾರ್ಥಿಗಳನ್ನು ಸಮರ್ಥ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಬಹುದೊಡ್ಡದು. ಶಿಕ್ಷಕರನ್ನು ಸಂಪೂರ್ಣ ಪಾರದರ್ಶಕ ಪ್ರಕ್ರಿಯೆ ಮೂಲಕ ನೇಮಕ ಮಾಡುವ ಜತೆಗೆ ಅವರಿಗೆ ಅರ್ಹತೆ, ಸಾಮರ್ಥ್ಯ ಮತ್ತು ಮೆರಿಟ್ ಮೇಲೆ ಮುಂಬಡ್ತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ರಾಜ್ಯದ ಮಟ್ಟಿಗೆ ಇದು ಗೊಂದಲ ಸೃಷ್ಟಿಸಲಿದೆ. ಏಕೆಂದರೆ, ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರಿಗೆ ಅವರ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆ ಆಧಾರದಲ್ಲಿ ಮುಂಬಡ್ತಿ ಸಿಗಲೆಂದೇ ಸುಪ್ರೀಂಕೋರ್ಟ್ ತೀರ್ಪನ್ನು ಬದಿಗೊತ್ತುವ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಹೀಗಿರುವಾಗ, ಕೇಂದ್ರದ ಹೊಸ ಶಿಕ್ಷಣ ನೀತಿಯಲ್ಲಿರುವ ಈ ಅಂಶವನ್ನು ರಾಜ್ಯ ಸರ್ಕಾರ ಹೇಗೆ ವ್ಯಾಖ್ಯಾನಿಸಲಿದೆ ಮತ್ತು ಅನುಷ್ಠಾನಗೊಳಿಸಲಿದೆ ಎಂಬುದು ಕುತೂಹಲಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net