

Killed: ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ನಾರಾಯಣಪುರಂ ಗ್ರಾಮದಲ್ಲಿ ತನ್ನ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಉದ್ದೇಶಪೂರ್ವಕವಾಗಿ ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾನೆ ಎಂದು ಭಾವಿಸಿ ಸಿಟ್ಟಿನಿಂದ 9 ತಿಂಗಳ ಅವಧಿಯಲ್ಲಿ ತನ್ನ ಎರಡೂ ಮಕ್ಕಳ ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ ಎಂದು ಶನಿವಾರ(ಸೆ. 27) ವರದಿಯಾಗಿದೆ.
ಆರೋಪಿ ತಾಯಿ ಸಿರಿಷಾಳನ್ನು ಬಂಧಿಸಲಾಗಿದೆ. ತನ್ನ ಪತಿ ಪಿ.ಉಪೇಂದ್ರ ತನ್ನನ್ನು ನಿರ್ಲಕ್ಷಿಸಿ ಬೇರೆ ಮಹಿಳೆ ಜೊತೆ ಸಂಬಂಧದಲ್ಲಿದ್ದಾನೆ ಎಂದು ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಮಕ್ಕಳನ್ನು ನನ್ನಿಂದ ಬೇರೆ ಮಾಡಿ ತನ್ನ ಹೆತ್ತವರೊಂದಿಗೆ ಇಟ್ಟುಕೊಂಡಿದ್ದಾನೆ ಎಂದು ಅನುಮಾನಿಸಿದ್ದಳು.
ಹೀಗಾಗಿ ಜನವರಿಯಲ್ಲಿ ತನ್ನ ಕಿರಿಯ ಮಗ ಪಿ.ನಿಹಾಲ್(2) ನನ್ನು ನೀರಿನ ಟ್ಯಾಂಕ್‌ಗೆ ಎಸೆದು ಕೊಂದು. ಅದನ್ನು ಅಪಘಾತವೆಂದು ಬಿಂಬಿಸಿದ್ದಳು. ಜುಲೈನಲ್ಲಿ ತನ್ನ ಎರಡನೇ ಮಗ ಪಿ ಮನೀಶ್ ಕುಮಾರ್ ನನ್ನು ಗಂಟಲು ಸೀಳಿ ಕೊಲ್ಲಲು ಯತ್ನಿಸಿದ್ದಳು. ಆದರೆ ಅವನು ಗಾಯವಾಗಿ ಬದುಕುಳಿದಿದ್ದನು. ಅಪರಿಚಿತ ದಾಳಿಕೋರರು ಅವನ ಮೇಲೆ ದಾಳಿ ಮಾಡಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು.
ಬುಧವಾರ (ಸೆ.24) ರಂದು ಸಿರಿಷಾ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೈಲಾನ್ ಹಗ್ಗದಿಂದ ಮನೀಶ್ ಕುಮಾರ್(5) ಅವರನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಇಬ್ಬರು ಮಕ್ಕಳು ಸಾವಿನ ಅನುಮಾನದ ಬಗ್ಗೆ ತಂದೆ ದೂರು ನೀಡಿದ್ದು,ಕೇಸಮುದ್ರಂ ಸಬ್-ಇನ್ಸ್‌ಪೆಕ್ಟರ್ ಜಿ ಮುರಳೀಧರ್ ರಾಜ್ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದಾಗ ಆರೋಪಿ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)