

ಬಿಹಾರ: ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿ ಇರಲಾರಳು ಎಂಬ ಗಾದೆಮಾತಿದೆ. ಆದರೆ ಅದನ್ನೇ ಸುಳ್ಳಾಗಿಸುವಂತೆ ಮೂವರು ಮಕ್ಕಳನ್ನು ತಾಯಿಯೇ ಕೊಂದ ಪ್ರಕರಣವೊಂದು ನಡೆದಿದ್ದು, ಪೊಲೀಸರು ಆಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಹಾರದ ಬುಕ್ಸಾರ್ ಜಿಲ್ಲೆಯ ಬರ್ಕಿ ಗಾಯಿ ಘಾಟ್ ಗ್ರಾಮದ ಪಿಂಕಿ ದೇವಿ ಎಂಬಾಕೆಯೇ ತನ್ನ ಮೂವರು ಮಕ್ಕಳನ್ನು ಕೊಂದ ತಾಯಿ. ಈಕೆ ಮಕ್ಕಳಾದ ಪೂನಂ (8), ರೋನಿ (7) ಮತ್ತು ಬಬ್ಲಿ (4) ಎಂಬವರನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಕೆ ಯಾವ ಕಾರಣಕ್ಕಾಗಿ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆ ಮಾಡಿದ್ದೇಕೆ ಎಂಬ ಬಗ್ಗೆ ಆಕೆ ಇನ್ನೂ ಸರಿಯಾಗಿ ಕಾರಣ ತಿಳಿಸದ್ದರಿಂದ ರಾಜ್ಯದಿಂದ ಹೊರಗಿರುವ ಆಕೆಯ ಪತಿಯನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೆ ಗುರುವಾರ ರಾತ್ರಿ ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಗಿ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಗಿ ತಿಳಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.