

ಬಾಗಲಕೋಟೆ: ಅತ್ಯಂತ ದುರಂತ ಎನ್ನುವಂಥ ಪ್ರಕರಣವೊಂದು ನಡೆದಿದೆ. ಒಬ್ಬ ಮಗನಿದ್ದರೂ ಇನ್ನೊಂದು ಗಂಡು ಮಗುವಾಗಿಲ್ಲ ಎಂದು ಮಹಿಳೆಯೊಬ್ಬಳು ಮೂವರು ಮಕ್ಕಳ ಸಹಿತ ಬಾವಿಗೆ ಹಾರಿದ್ದು, ಕೊನೆಗೆ ಮೂವರು ಮಕ್ಕಳೂ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ಈ ಪ್ರಕರಣ ನಡೆದಿದೆ. ಸಂಗೀತಾ ಗುಡೆಪ್ಪನವರ್ ಎಂಬಾಕೆ ಬದುಕುಳಿದ ತಾಯಿ. ಈಕೆಯ 17 ದಿನಗಳ ಹೆಣ್ಣು ಮಗು ಸೌಜನ್ಯ, ಮಗ ಶ್ರೀಶೈಲ (5), ಮಗಳು ಶ್ರಾವಣಿ (3) ಸಾವಿಗೀಡಾಗಿದ್ದಾರೆ.
ಇತ್ತೀಚೆಗೆ ಹೆರಿಗೆ ಆಗಿದ್ದ ಸಂಗೀತಾಗೆ ಮೂರನೇ ಮಗು ಗಂಡೇ ಆಗಬೇಕು ಎಂಬ ಆಸೆ ಇತ್ತು. ಆದರೆ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ತೀವ್ರವಾಗಿ ಮನನೊಂದ ಈಕೆ ಮಗು ಸೇರಿ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿದ್ದಳು.
ಪತಿ ಹನಮಂತ ಗುಡೆಪ್ಪನವರ್ ತಕ್ಷಣ ರಕ್ಷಣೆಗೆ ಧಾವಿಸಿದ್ದರಿಂದ ಸಂಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ತಂದೆ ಹರಸಾಹಸ ಪಟ್ಟಿದ್ದರೂ ಸಾಧ್ಯವಾಗಿಲ್ಲ. ಮಕ್ಕಳನ್ನ ಬಾವಿಗೆ ತಳ್ಳಿದ್ದ ಹಿನ್ನೆಲೆಯಲ್ಲಿ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.