

ಶಿವಮೊಗ್ಗ: ಇಲ್ಲೋರ್ವ ತಾಯಿ ತನ್ನ ಮಗುವನ್ನು ಅಪಹರಣ ಮಾಡಲು ಯತ್ನಿಸಿದವನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ಅಮ್ಮನ ಧೈರ್ಯವನ್ನು ಮೆಚ್ಚಿಕೊಳ್ಳಲೇ ಬೇಕು...!
ತೀರ್ಥಹಳ್ಳಿ ಪಟ್ಟಣದ ಹೊರವಲಯದ ಮೇಲಿನಕುರುವಳ್ಳಿಯಲ್ಲಿ ಘಟನೆ ನಡೆದಿದೆ. ತಾಯಿ ಕೃಷ್ಣವೇಣಿ ಅಡುಗೆ ಮಾಡುತ್ತಿದ್ದರೆ ನಾಲ್ಕು ವರ್ಷದ ಹೆಣ್ಣುಮಗು ಹಾಲ್ನಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಪರಿಚಿತನೋರ್ವ ಮನೆವರೆಗೆ ಬಂದು ಆ ಮಗುವನ್ನೇ ಅಪಹರಣ ಮಾಡಲು ಯತ್ನಿಸಿದ.
ಹಾಲ್ನಿಂದ ಮಗು ಕೂಗುವುದನ್ನು ಕೇಳಿದ ತಾಯಿ ಓಡಿ ಬಂದು ನೀಡಿದರೆ ದುಷ್ಟ ಮಗುವನ್ನು ಎತ್ತಿಕೊಂಡು ಓಡಲು ಯತ್ನಿಸುತ್ತಿದ್ದ. ಬಿಡಿಸಲು ಬಂದ ಕೃಷ್ಣವೇಣಿಯ ಕತ್ತು ಹಿಸುಕಿ ದೂಡಿದ. ಕೂಡಲೇ ಅಡುಗೆ ಮನೆಗೆ ಓಡಿಹೋದ ಕೃಷ್ಣವೇಣಿಯವರು ಈಳಿಗೆ ಮಣೆಯನ್ನು ತಂದು ಅಪಹರಣಕಾರನ ಕೈಗೆ ಹೊಡೆದಿದ್ದಾರೆ. ಗಾಯವಾಗಿ ನೋವಾಗುತ್ತಿದ್ದಂತೆ ಮಗುವನ್ನು ಬಿಟ್ಟು ಆತ ಓಡಿಹೋಗಿದ್ದಾನೆ.
ಕೃಷ್ಣವೇಣಿಯವರು ಜೋರಾಗಿ ಕೂಗಿಕೊಂಡಿದ್ದರಿಂದ ಅಷ್ಟರಲ್ಲಾಗಲೇ ಸ್ಥಳದಲ್ಲಿ ಹಲವು ಜನರು ಜಮಾಯಿಸಿದ್ದರು. ನಂತರ ತೀರ್ಥಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೂಡ ತೀರ್ಥಹಳ್ಳಿಯಲ್ಲಿ ಮಕ್ಕಳ ಅಪಹರಣಗಳು ನಡೆಯುತ್ತಿವೆ ಎಂದು ಸುದ್ದಿ ಹಬ್ಬಿತ್ತು. (ದಿಗ್ವಿಜಯ ನ್ಯೂಸ್)