

ಶಿಕಾರಿಪುರ: ಪಟ್ಟಣದ ಕೆಎಚ್‌ಬಿ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಳಪೆ ಕಾಮಗಾರಿಯಿಂದ ಕೂಡಿದ್ದು, ಕೂಡಲೇ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಕ್ತಿ ಸಂಗ್ರಾಮ ವೇದಿಕೆ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವಯ್ಯ ಎಸ್.ಶಾಸ್ತ್ರಿ ಮಾತನಾಡಿ, ಶಿಕಾರಿಪುರದ ನೂತನ ಆಸ್ಪತ್ರೆ ಕಾಮಗಾರಿ ಕಳಪೆ ಆಗಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವಘಡ ನಡೆಯುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಳಪೆ ಕಾಮಗಾರಿ ನಡೆಸಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ರಾಜ್ಯ ಉಪಾಧ್ಯಕ್ಷ ರವಿನಾಯ್ಕ, ತಾಲೂಕು ಅಧ್ಯಕ್ಷ ಎಚ್.ಆನಂದ್, ಗೌರವಾಧ್ಯಕ್ಷ ರವೀಂದ್ರ ಕಿಟ್ಟಿ, ಉಪಾಧ್ಯಕ್ಷ ಮುಕ್ತಾರ್ ಅಹಮದ್, ಸದಸ್ಯರಾದ ತೇಜಪ್ಪ, ಶಶಿಕುಮಾರ್, ಶಂಕರ್ ನಾಯಕ್, ಗುತ್ತಿ ಕಣ್ಣಪ್ಪ, ಗಿರೀಶ್ ನಾಯಕ್, ಪುಟ್ಟ ನಾಯಕ್, ಸಂತೋಷ್ ಇತರರಿದ್ದರು.