

ನವದೆಹಲಿ: ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು’ ಎಂಬ ಮಾತಿದೆಯಷ್ಟೇ. ಇದಕ್ಕೊಂದು ಹೊಸ ನಿದರ್ಶನ ಇಲ್ಲಿದೆ. ನೀಲಗಿರಿ ಬೆಟ್ಟಗಳ ಮೇಲೆ ತಾಯಿ ಕರಡಿಯೊಂದು ಇತರ ಕರಡಿಗಳಿಗೆ ಅತಿ ಸುಲಭವಾಗಿ ಸರಸರನೆ ಮರ ಏರುವುದನ್ನು ತೋರಿಸಿಕೊಡುತ್ತದೆ. ಅದನ್ನು ನೋಡಿದ ಆ ಕರಡಿಗಳೂ ಮರ ಏರತೊಡಗುತ್ತವೆ.
ಮರ ಹತ್ತುವ ಪಾಠ ಕಲಿಸುತ್ತಿರುವ ತಾಯಿ ಕರಡಿಯ ಈ ವಿಡಿಯೋ ಟ್ವೀಟ್ ಮಾಡಿದವರು ಐಎಫ್ಎಸ್ ಅಧಿಕಾರಿ ಸುಧಾ ರಮಣ್. ಜತೆಗೆ ಅವರು, ‘ನೀವು ಕಾಡು, ಬೆಟ್ಟಗಳ ಸಮೀಪ ಇದ್ದರೆ - ಮರಗಳ ಮೇಲಿನಿಂದ ಯಾರೋ ನಿಮ್ಮನ್ನು ಗಮನಿಸುತ್ತಿದ್ದಾರೆಂಬುದನ್ನೂ ನೆನಪಿಟ್ಟುಕೊಳ್ಳಬೇಕು’ ಎಂಬ ಟಿಪ್ಪಣಿ ಸೇರಿಸಿದ್ದಾರೆ. ಈ ಸನ್ನಿವೇಶವನ್ನು ವಿಡಿಯೋದಲ್ಲಿ ಸೆರೆಹಿಡಿದವರು ಯಾರೆಂದು ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.